Index   ವಚನ - 239    Search  
 
ಲಿಂಗ ಲಿಂಗಿಗಳ ದರ್ಶನ:ಸಾಲೋಕ್ಯಪದ. ಲಿಂಗ ಲಿಂಗಿಗಳ ಸ್ನೇಹ ನಿರಂತರ ಸ್ನೇಹಸಂಗ:ಸಾಮಿಪ್ಯಪದ. ಲಿಂಗ ಲಿಂಗಿಗಳ ಸಂಗ ಹಿಂಗದೆ, ಮನೋವಾಕ್ಕಾಯದಲ್ಲಿ ವಂಚನೆಯಿಲ್ಲದೆ ತನುಮನಧನವನರ್ಪಿಸಿ ಲಿಂಗಭರಿತ ಶರಣಮೂರ್ತಿಯನು ಕಂಗಳಲ್ಲಿ ಮನದಲ್ಲಿ ಹೃದಯದಲ್ಲಿ ಭರಿತನಾಗಿ ಮೂರ್ತಿಗೊಳಿಸುವುದು:ಸಾರೂಪ್ಯಪದ. ಲಿಂಗ ಲಿಂಗಿಗಳ ಶ್ರೀಪಾದಪದ್ಮದಲ್ಲಿ, ಮನೋವಾಕ್ಕಾಯದಲ್ಲಿ ನಿರಂತರ ಐಕ್ಯನಾಗಲು ಸಾಯುಜ್ಯಪದವಯ್ಯಾ. ಇದೇ ಚತುರ್ವಿಧಪದ, ಇದೇ ಚತುರ್ವಿಧಪದಕ್ಕೆ ವಿಶೇಷಪದ. ಸಾಲೋಕ್ಯಂ ಚ ತು ಸಾಮಿಪ್ಯಂ ಸಾರೂಪ್ಯಂ ಚ ಸಾಯುಜ್ಯತಾ ತತ್ಪದೇಭ್ಯೋ ವಿಶೇಷಶ್ಚ ಶಿವದಾಸೋಹ ಉತ್ತಮಃ' ಎಂದುದಾಗಿ, ಇತರ ಪದವ ನಿಶ್ಚೈಸಲು ಸಾಲೋಕ್ಯಂ ಚ ತು ಸಾಮಿಪ್ಯಂ ಸಾರೂಪ್ಯಂ ಚ ಸಾಯುಜ್ಯತಾ ಸಕೃತಾಪೇಕ್ಷಿಭಕ್ತಾನಾಂ ನಾಸ್ತಿ ಲಿಂಗಂ ಗುರೋಃ ಪರು' ಎಂದುದಾಗಿ, ಇತರ ಪದವ ಬಯಸದಿರಿ. ಮಹಾಪದ ಚತುರ್ವಿಧಪದಕ್ಕೆ ವಿಶೇಷಃ. ಶರಣರಿಗೆ ಶರಣೆಂಬುದೇ ಪದ ಕಾಣಿರಣ್ಣಾ, ಶರಣೆನ್ನದೆ ಪದವ ಬಯಸಿದ ದಕ್ಷ ನಾರಸಿಂಹಾದಿಗಳು ಕೆಟ್ಟರು, ಶರಣೆಂದು ಮಹಾಪದವ ಪಡೆದರು. ಶರಣರಿಗೆ ಶರಣೆನ್ನದೆ ನಂಬಿಯಣ್ಣನು ಶರಣರಿಗೆ ಹೊರಗಾಗಿ ಅರಿದು ಸದ್ಭಕ್ತಿಯಿಂ ಶರಣೆಂದು ಶರಣರೊಳಗಾದನು, ಇಹಪರಭೋಗವನು ವಿಶೇಷವಾಗಿ ಹಡೆದನು. ಶರಣರಿಗೆ ಶರಣೆನ್ನದೆ ಕೆಟ್ಟರು ಕಾಲ, ಕಾಮ, ಇಂದ್ರ ಮೊದಲಾದವರನೇಕರು. ಅವರಂತಾಗದಿರಿ. ಶರಣರಿಗೆ ಶರಣೆನ್ನಿ, ಇದೇ ಭಕ್ತಿ, ಇದೇ ಮುಕ್ತಿ. ಶರಣರಿಗೆ ಶರಣೆನ್ನದೆ, ಭಕ್ತಿಯೆಂದಡೆ ಮುಕ್ತಿಯೆಂದಡೆ ಪದವ ಬಯಸಿದಡೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಲಿಂಗವು ನಗುವು ನಗುವನು, ನಾಯಕನರಕದಲ್ಲಿಕ್ಕುವನಯ್ಯಾ.