Index   ವಚನ - 271    Search  
 
ವೇದಮಾರ್ಗವ ಮೀರಿದರು ಮಹಾವೇದಿಗಳು ಲಿಂಗವಂತರು, ಆ ಲಿಂಗವಂತರ ಮಹಾವೇದಮಾರ್ಗವ ಲಿಂಗವೇ ಬಲ್ಲನಯ್ಯಾ. ಶಾಸ್ತ್ರಮಾರ್ಗವ ಮೀರಿದರು ಮಹಾಶಾಸ್ತ್ರಜ್ಞರು ಲಿಂಗವಂತರು. ಆ ಲಿಂಗವಂತರ ಮಹಾಶಾಸ್ತ್ರಮಾರ್ಗವ ಲಿಂಗವೇ ಬಲ್ಲನಯ್ಯಾ. ಆಗಮಕ್ರೀಯ ಮೀರಿದರು ಮಹಾ ಆಗಮಿಕರು ಲಿಂಗವಂತರು, ಲಿಂಗವಂತರ ಮಹಾ ಆಗಮಕ್ರೀಯ ಲಿಂಗವೇ ಬಲ್ಲನಯ್ಯಾ. ಪುರಾಣದ ಪರಿಯ ಮೀರಿದರು ಮಹಾಪುರಾಣಿಕರು ಲಿಂಗವಂತರು, ಆ ಲಿಂಗವಂತರ ಪುರಾಣದ ಪರಿಯ ಆ ಲಿಂಗವೇ ಬಲ್ಲನಯ್ಯಾ. ದೇವ ದಾನವಮಾನವರಿಗೆಯೂ ಅರಿಯಬಾರದು. 'ವೇದಶಾಸ್ತ್ರಪುರಾಣಾನಿ ಸ್ಪಷ್ಟಂ ವೇಶ್ಯಾಂಗನಾ ಇವ ಯಾ ಪುನಶ್ಶಾಂಕರೀ ವಿದ್ಯಾ ಗುಪ್ತಾ ಕುಲವಧೂರಿವ' ಎಂದುದಾಗಿ, ಆರಿಗೆಯೂ ಅರಿಯಬಾರದು. ಲಿಂಗವಂತರು ಉಪಮಾತೀತರು, ವಾಙ್ಮನೋತೀತರು, ಆರ ಪರಿಯೂ ಇಲ್ಲ. ಸ್ವೇಚ್ಛಾವಿಗ್ರಹೇಣೈವ ಸ್ವೇಚ್ಛಾಚಾರಗಣೇಶ್ವರಾಃ ಶಿವೇನ ಸಹ ತೇ ಭುಙ್ತ್ವಾ ಭಕ್ತಾ ಯಾಂತಿ ಶಿವಂ ಪದಂ' ಲೋಕಾಚಾರನಿಬಂಧೇನ ಲೋಕಾಲೋಕವಿವರ್ಜಿತಾಃ ಲೋಕಾಚಾರಂ ಪರಿತ್ಯಜ್ಯ ಪ್ರಾಣಲಿಂಗಪ್ರಸಾದಿನಃ' ಎಂದುದಾಗಿ, ಈ ಲೋಕದ ಮಾರ್ಗವ ನಡೆಯರು, ಲೋಕದ ಮಾರ್ಗವ ನುಡಿಯರು. ಲಿಂಗವಂತರ ನಡೆ ನುಡಿ ಆಚಾರ ಅನುಭವ ಆಯತ ಬೇರೆ ಕಾಣಿರಣ್ಣಾ. ಶ್ರೀಗುರುಲಿಂಗದಿಂದಲುದಯಿಸಿ ಪ್ರಾಣಲಿಂಗಸಂಬಂಧಿಗಳಾದ ಮಹಾಲಿಂಗವಂತರಿಗೆ ಪ್ರಾಣಲಿಂಗ, ಕಾಯಲಿಂಗ ಭಕ್ತಕಾಯ ಮಮಕಾಯವಾಗಿ ದೇಹಾದಿ ತತ್ತ್ವವೆಲ್ಲಾ ಶಿವತತ್ತ್ವ. ಇದು ಕಾರಣ, ಸರ್ವಾಂಗಲಿಂಗಮಹಾಮಹಿಮ ಲಿಂಗವಂತರ ಕ್ರೀಯೆಲ್ಲವೂ ಲಿಂಗಕ್ರೀ. ಮುಟ್ಟಿದುದೆಲ್ಲಾ ಅರ್ಪಿತ, ಕೊಂಡುದೆಲ್ಲಾ ಪ್ರಸಾದ. ಸದ್ಯೋನ್ಮುಕ್ತರು, ಸರ್ವಾಂಗಲಿಂಗವಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.