Index   ವಚನ - 288    Search  
 
ಶಿವನು ಸರ್ವಗತನು, ಸಕಲಬ್ರಹ್ಮಾಂಡಗಳಿಗೆಲ್ಲ ಸಕಲನೆಂದು ಹೇಳಿತ್ತು ಶ್ರುತಿ. `ವಿಶ್ವತಶ್ಚಕ್ಷುರುತ ವಿಶ್ವಾಧಿಕೋ ರುದ್ರೋ ಮಹಾಋಷಿಸ್ಸರ್ವೋ ಹಿ ರುದ್ರಃ' ಎಂದು ಶ್ರುತಿ ಸಕಲಜೀವಚೈತನ್ಯ ಶಿವನೆಂದು ಹೇಳಿತ್ತು, ಇಂತಪ್ಪ ಶಿವಲಿಂಗಾರ್ಚನೆಯ ಮಾಡುವ ಸದ್ಭಕ್ತರ ಶ್ರೀಮೂರ್ತಿಗಿನ್ನು ಸರಿ ಉಂಟೆ? 'ವಾಚಾತೀತಂ ಮನೋತೀತಂ ಭಾವಾತೀತಂ ಪರಂ ಶಿವಂ ಸರ್ವಶೂನ್ಯಂ ನಿರಾಕಾರಂ ನಿತ್ಯಂ ತತ್ಪರಮಂ ಪದಂ' ಇಂತಪ್ಪ ಶರಣರ ಕಂಡಡೆ ಕರ್ಮಕ್ಷಯ, ನೋಡಿ ನುಡಿಸಿ ಏಕರಾತ್ರಿ ಸಂಭಾಷಣೆಯ ಮಾಡಿದಡೆ ಜನ್ಮಕರ್ಮನಿವೃತ್ತಿ, ಜೀವನ್ಮುಕ್ತನಹನು ಇದು ಸತ್ಯ ಕೇಳಿರಣ್ಣಾ. 'ದರ್ಶನಾತ್ ಶಿವಭಕ್ತಾನಾಂ ಸಕೃತ್ಸಂಭಾಷಣಾದಪಿ ಅತಿರಾತ್ರಸ್ಯ ಯಜ್ಞಸ್ಯ ಫಲಂ ಭವತಿ ನಾರದ' ಎಂದು ನಾರದೀಯ ಬೋಧೆಯಲ್ಲಿ ಈಶ್ವರನು ಹೇಳಿಹನು. ಇಂತಪ್ಪ ಈಶ್ವರನ ಕಾಣವು ವೇದಂಗಳು. ಇಂತು ವೇದಕ್ಕತೀತವಂತಹ ಶಿವಶರಣರ ಮಹಾತ್ಮೆಯ ಹೊಗಳಲಿಕ್ಕೆ ವೇದಕ್ಕಳವಲ್ಲ, ಮಂದಮತಿ ಮಾನವರ ಮಾತದಂತಿರಲಿ. ಶಿವಶರಣರ ಮಹಾಮಹಿಮೆಗೆ ನಮೋ ನಮೋ ಎನುತಿಪ್ಪೆ ಕಾಣಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.