ಶ್ರೀಗುರು ಶಿಷ್ಯಂಗೆ ಮಂತ್ರವ ಮೂರ್ತಿಗೊಳಿಸಬೇಕಾಗಿ,
ಪೃಥ್ವಿಯ ಮೇಲಣ ಕಣಿಯ ತಂದು, ಇಷ್ಟಲಿಂಗಮಂ ಮಾಡಿ,
ಶಿಷ್ಯನ ತನುವಿನ ಮೇಲೆ ಧರಿಸಿದ ಲಿಂಗವು
ಅವತಳವಾಗಿ ಭೂಮಿಯಲ್ಲಿ ಸಿಂಹಾಸನಂಗೊಂಡಿತ್ತೆಂದು
ಸಮಾಧಿಯ ಹೋಗುವರಯ್ಯಾ.
ಲಿಂಗಕ್ಕೆ ಅವತಳವಾದಡೆ, ಭೂಮಿ ತಾಳಬಲ್ಲುದೆ?
ಮಾರಾಂತನ ಗೆಲಿವೆನೆಂದು ಗರಡಿಯ ಹೊಕ್ಕು
ಕಠಾರಿಯ ಕೋಲ (ತ)ಳೆದುಕೊಂಡು, ಸಾಧನೆಯ ಮಾಡುವಲ್ಲಿ
ಕೈತಪ್ಪಿ ಕೋಲು ನೆಲಕ್ಕೆ ಬಿದ್ದಡೆ, ಆ ಕೋಲ ಬಿಟ್ಟು
ಸಾಧನೆಯಂ ಬಿಟ್ಟು ಕಳೆವರೇ ಅಯ್ಯ?
ತಟ್ಟಿ ಮುಟ್ಟಿ ಹಳಚುವಲ್ಲಿ
ಅಲಗು ಬಿದ್ದಡೆ ಭಂಗವಲ್ಲದೆ ಕೋಲು ಬಿದ್ದಡೆ ಭಂಗವೇ ಅಯ್ಯ?
ಆ ಕೋಲ (ತ)ಳೆದುಕೊಂಡು ಸಾಧನೆಯಂ ಮಾಡುವದೇ ಕರ್ತವ್ಯ.
ಆ ಲಿಂಗ ಹುಸಿ ಎಂದಡೇನಯ್ಯ?
ಶ್ರೀ ವಿಭೂತಿವೀಳೆಯಕ್ಕೆ ಸಾಕ್ಷಿಯಾಗಿ ಬಂದ ಶಿವಗಣಂಗಳು ಹುಸಿಯೇ?
ಆ ಗಣಂಗಳು ಹುಸಿಯಾದಡೆ,
ಕರ್ಣಮಂತ್ರ ಹುಸಿಯೇ?
ಆ ಕರ್ಣಮಂತ್ರ ಹುಸಿಯಾದಡೆ,
ಶ್ರೀಗುರುಲಿಂಗವು ಹುಸಿಯೇ?
ಶ್ರೀಗುರುಲಿಂಗ ಹುಸಿಯಾದಡೆ ಜಂಗಮಲಿಂಗ ಹುಸಿಯೇ?
ಆ ಜಂಗಮಲಿಂಗ ಹುಸಿಯಾದಡೆ,
ಪಾದತೀರ್ಥ ಪ್ರಸಾದ ಹುಸಿಯೇ?
ಇಂತೀ ಷಟ್ಸ್ಥಲವ ತುಚ್ಛವ ಮಾಡಿ,
ಗುರೂಪದೇಶವ ಹೀನವ ಮಾಡಿ, ಸಮಾಧಿಯ ಹೊಗುವ
ಪಂಚಮಹಾಪಾತಕರ ಮುಖವ ನೋಡಲಾಗದು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.