ಸತ್ಕ್ರೀಯಿಂದ ಸಕಲಪದಾರ್ಥಂಗಳ ಭಾಜನ ತೀವಿ,
ತನ್ನ ಲಿಂಗಕ್ಕೆ ಕೊಟ್ಟಲ್ಲದೆ ಕೊಳ್ಳೆನೆಂಬ
ಅಚ್ಚ ಪ್ರಸಾದಿಗಳಿಗೆ ಹುಸಿ ಹೊದ್ದಿತಲ್ಲಾ
ಪೃಥ್ವಿ ಅಪ್ಪು ತೇಜ ವಾಯು ಆಕಾಶ
ಕತ್ತಲೆ ಬಿಸಿಲು ಬೆಳದಿಂಗಳು
ಮುಂತಾದ ಪದಾರ್ಥಂಗಳು
ತನ್ನಂಗವ ಸೋಂಕಿ
ಅಲ್ಲಿ ಅರ್ಪಿತವೆಂದು ಕೊಳ್ಳಬಾರದು,
ಅನರ್ಪಿತವೆಂದು ಕಳೆಯಬಾರದು.
ಇದು ಕಾರಣವಾದಂತಿರಲಿ,
ಆವ ವೇಳೆಯಲ್ಲಿ ಆವ ಠಾವಿನಲ್ಲಿ
ತನಗೆ ಬೇಕಾದ ಪದಾರ್ಥಂಗಳನು,
ತನ್ನ ಪ್ರಾಣಲಿಂಗವಿರಹಿತವಾಗಿ
ಉಂಡಡೆ ಭವದುಃಖವನುಂಬುದು ತಪ್ಪದಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.