Index   ವಚನ - 21    Search  
 
ನಿಮ್ಮ ತಂದಿ ಸತ್ತದ್ದು ನೋಡುತ್ತಿದ್ದಿ, ನಿಮ್ಮ ತಂದಿಯ ತಂದಿ ಸತ್ತದ್ದು ಕಾಣುತ್ತಿದ್ದಿ, ನಿಮ್ಮ ಅಜ್ಜ ಪಣಜ ಸತ್ತದ್ದು ಕೇಳುತ್ತಿದ್ದಿ, ನಿಮ್ಮ ತಾಯಿ ಸತ್ತದ್ದು ನೋಡುತ್ತಿದ್ದಿ, ನಿಮ್ಮ ತಾಯಿಯ ತಾಯಿ ಸತ್ತದ್ದು ಕಾಣುತ್ತಿದ್ದಿ, ನಿಮ್ಮ ತಾಯಿಯ ಅಜ್ಜಿ ಪಣಜಿ ಸತ್ತದ್ದು ಕೇಳುತ್ತಿದ್ದಿ. ನಿನ್ನ ಸತಿಸುತರು ಒಡಹುಟ್ಟಿದ ಬಂಧುಗಳು ಸ್ನೇಹಿತರು ಬೀಗರು ಮೊದಲಾದ ಸಕಲಲೋಕಾದಿಲೋಕಂಗಳು ನಿಮ್ಮ ಕಣ್ಣಮುಂದೆ ವೃಕ್ಷದ ಪರ್ಣಗಳು ಉದುರಿದ ಹಾಗೆ ಸಕಲರು ಅಳಿದುಹೋಗುವುದ ನೋಡುತ್ತಿದ್ದಿ. ಇದಲ್ಲದೆ ದೃಷ್ಟಾಂತ: ಒಬ್ಬ ರೋಮಜಋಷಿಗೆ ಮೂರುವರೆಕೋಟಿ ರೋಮಂಗಳುಂಟು, ಅಂತಹ ಋಷಿಗೂ ಕೃತಯುಗ, ತ್ರೇತಾಯುಗ, ದ್ವಾಪರ, ಕಲಿಯುಗವೆಂಬ ಚತುರ್ಯುಗ ಪ್ರಳಯವಾದಲ್ಲಿ ಒಂದು ರೋಮ ಉದುರುವದು. ಹೀಗೆ ಈ ಪರಿಯಲ್ಲಿ ಮೂರುವರೆಕೋಟಿ ರೋಮಂಗಳು ಉದುರಿದಲ್ಲಿ ಆ ರೋಮಜಋಷಿಯೆಂಬ ಮುನೀಶ್ವರನು ಪ್ರಳಯವಾಗುವನು. ಮತ್ತೆ ದೇವಲೋಕದ ಸನಕ ಸನಂದಾದಿ ಮುನಿಜನಂಗಳು ಅನಂತಕೋಟಿ ಋಷಿಗಳು ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ ಮೊದಲಾದ ತೆತ್ತೀಸಕೋಟಿ ದೇವರ್ಕಳು ಇಂತಿವರೆಲ್ಲರು ಎತ್ತಲಾನುಕಾಲಕ್ಕೆ ಮರಣಕ್ಕೆ ಒಳಗಾದರು. ವೇದಾಗಮ ಶಾಸ್ತ್ರ ಪುರಾಣ ಶ್ರುತಿ ಪ್ರಮಾಣಗಳಿಂದ ಮತ್ತೆ ಹರ, ಗುರು, ಪುರಾತನರ ವಾಕ್ಯದಿಂದ ನಿಮ್ಮ ಉಭಯ ಕರ್ಣದಿಂ ಕೇಳುತ್ತಿದ್ದಿ. ಇಂತೀ ಎಲ್ಲವನು ಕಂಡು ಕೇಳಿ ಗಾಢನಿದ್ರೆಯ ಮನುಷ್ಯನ ಹಾಂಗೆ ನಿನ್ನ ನಿಜಸ್ವರೂಪವ ಮರದು ತ್ರಿವಿಧಮಲವ ಕಚ್ಚಿ ಶುನಿ ಶೂಕರನ ಹಾಗೆ ಕಚ್ಚಿ ಕಡಿದಾಡಿ ಸತ್ತು ಹೋಗುವ ವ್ಯರ್ಥಗೇಡಿ ಮೂಳ ಹೊಲೆಮಾದಿಗರ ಕಿವಿಯ ಹರಿದು, ಕಣ್ಣುಗುಡ್ಡಿಯ ಮೀಟಿ, ನೆತ್ತಿಯ ಮೇಲೆ ಮೂರು ಪಟ್ಟೆಯನೆ ಕೆತ್ತಿ ಅವನ ಮುಖದ ಮೇಲೆ ಹೆಂಡಗಾರನ ಮುಖದಿಂದ ಲೊಟ್ಟಲೊಟ್ಟನೆ ಉಗುಳಿಸಿ ಪಡುವಲದಿಕ್ಕಿಗೆ ಅಟ್ಟೆಂದ ಕಾಣಾ ವೀರಾಧಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.