Index   ವಚನ - 76    Search  
 
ಇಂತಪ್ಪ ಪ್ರಣವಪಂಚಾಕ್ಷರಿ ಮಂತ್ರವನು ಸಾಯದಕಿನ್ನ ಮುನ್ನವೆ ಸುಜ್ಞಾನೋದಯವಾಗಿ ಶ್ರೀಗುರುಕಾರುಣ್ಯವ ಹಡದು ಸರ್ವಾಂಗದಲ್ಲಿ ಪ್ರಣವ ಮಂತ್ರವನು ಸಂಬಂಧಿಸಿಕೊಳ್ಳಬೇಕಲ್ಲದೆ, ಸತ್ತ ಶವಕ್ಕೆ ಭುಜಪತ್ರದ ಮೇಲೆ ಪ್ರಣಮವ ಬರದು ಆ ದೇಹಕ್ಕೆ ಹಚ್ಚಿದರೆ ಆ ದೇಹವು ಮಂತ್ರದೇಹವಾಗಬಲ್ಲದೆ? ಆಗಲರಿಯದು. ಅದೆಂತೆಂದಡೆ: ಚಿತ್ರಕನು ಕಾಗದದ ಮೇಲೊಂದು ಚಿತ್ರವ ಬರೆದು ಗೋಡೆಗೆ ಹಚ್ಚಿದರೆ ಆ ಗೋಡೆಯು ಚಿತ್ರವಾಗಲರಿಯದು ಎಂಬ ಹಾಗೆ. ಉಭಯವು ಒಂದೇ ಆದ ಕಾರಣ ; ಅಂತಪ್ಪ ಮೂಢಾತ್ಮರ ಮೇಳಾಪವ ವಿಸರ್ಜಿಸಿದ ಶಿವಶರಣನು ದೇಹದಲ್ಲಿರುವ ಪರಿಯಂತರದಲ್ಲಿ ಶ್ರೀಗುರುಕಾರುಣ್ಯವ ಹಡದು ಸರ್ವಾಂಗದಲ್ಲಿ ಪ್ರಣವಮಂತ್ರವನು ಮುಳ್ಳೂರಲಿಕ್ಕೆ ಇಂಬಿಲ್ಲದ ಹಾಗೆ ಸ್ವಾಯತವ ಮಾಡಿಕೊಂಡು ಆ ಮಂತ್ರದಲ್ಲಿ ಲೀಯವಾಗಿ ಪ್ರಪಂಚವನಾಚರಿಸುತ್ತಿರ್ದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.