Index   ವಚನ - 96    Search  
 
ಇಂತಪ್ಪಪ್ರಸಾದದ ಘನವನರಿಯದೆ ಸ್ಥಾವರಕ್ಕೆ ಕೊಟ್ಟ ದ್ರವ್ಯವು ಲಿಂಗಕ್ಕೆ ಸಲ್ಲದೆಂಬರು. ಅದೇನು ಕಾರಣವೆಂದಡೆ: ಸ್ಥಾವರವು ನಿಶ್ಶಬ್ದ, ಲಿಂಗವು ಮಂತ್ರಶಬ್ದ ಎಂಬರಯ್ಯಾ. ಎಲೆ ಮರುಳ ಮಾನವರಿರಾ, ಹದಿನೆಂಟು ಜೀನಸು ಧಾನ್ಯವು ಭೂಮಿಯಲ್ಲಿ ಬೆಳೆಯುವದು. ಆ ಭೂಮಿ ಸ್ಥಾವರವಲ್ಲವೆ? ಆ ಧಾನ್ಯವ ತಂದು ಕಲ್ಲವಳ್ಳಿಗೆ ಹಾಕಿ ಕುಟ್ಟಿ ಬೀಸಿ ಗಡಿಗೆಯೊಳಗೆ ಹಾಕಿ ಪಾಕವ ಮಾಡುವರು. ಆ ಕಲ್ಲು ಒಳ್ಳು ಗಡಿಗೆ ಸ್ಥಾವರವಲ್ಲವೆ? ಅಂತಪ್ಪ ಪಾಕವನು ಗಡಿಗೆಯೊಳಗೆ ಇದ್ದಾಗ ಬೋನವೆಂಬರು. ಹರಿವಾಣಕ್ಕೆ ಬಂದಲ್ಲಿ ನೈವೇದ್ಯವೆಂಬರು. ಜಂಗಮದ ಹಸ್ತಸ್ಪರ್ಶವಾದಾಗಲೇ ಪದಾರ್ಥದ ಪೂರ್ವಾಶ್ರಯವಳಿಯಿತೆಂಬರು. ಜಂಗಮವು ತನ್ನ ಲಿಂಗಕ್ಕೆ ತೋರಿ, ಸಲಿಸಿದ ಮೇಲೆ ಪ್ರಸಾದವಾಯಿತೆಂಬರು. ಇಂತಪ್ಪ ಪ್ರಸಾದಕ್ಕೆ 'ಅಯ್ಯಾ ಹಸಾದ ಮಹಾಪ್ರಸಾದ ಪಾಲಿಸಿರೆ'ಂದು ಕೂಳ ಚೆಲ್ಲಿದರೆ ಕಾಗಿ ನೆರೆದು ಒಂದಕ್ಕೊಂದು ಕಚ್ಚಿ ಕಡಿದಾಡುವಂತೆ, ಒಬ್ಬರಿಗೊಬ್ಬರು ನಾ ಮುಂದೆ ನೀ ಮುಂದೆಂದು ಅಡ್ಡಡ್ಡ ಬಿದ್ದು, ಆ ಜಂಗಮ ತಿಂದ ಎಂಜಲ ಪ್ರಸಾದವೆಂದು ಪಡಕೊಂಡು ತಮ್ಮ ತಮ್ಮ ಲಿಂಗಕ್ಕೆ ತೋರಿ ತೋರಿ ಆಧಾರಸ್ಥಾನ ಮೊದಲಾಗಿ ವಿಶುದ್ಧಿಸ್ಥಾನ ಪರಿಯಂತರ ತೊಗಲತಿತ್ತಿ ನೀರ ತುಂಬಿದಂತೆ ತುಂಬಿಕೊಂಡು, ಸತ್ತ ಮೊಲದಂತೆ ಕಣ್ಣ ಬಿಡುವಣ್ಣಗಳು ನಿಮ್ಮ ಶಿವಶರಣರ ಮಹಾಘನಪ್ರಸಾದವ ಈ ಕುರಿಮನುಜರೆತ್ತಬಲ್ಲರಯ್ಯ. ಅದೆಂತೆಂದಡೆ : ಲಿಂಗಕ್ಕೆ ಶಿವಕಳೆಯಿಲ್ಲ, ಭಕ್ತಂಗೆ ಗುರುಕಾರುಣ್ಯವಿಲ್ಲ, ಜಂಗಮಕ್ಕೆ ಪರಮಕಳೆಯಿಲ್ಲ. ಪ್ರಸಾದಕ್ಕೆ ಜಡರೂಪಿಲ್ಲದಾದಕಾರಣ ಹೀಗೆಂಬುದ ತಿಳಿಯದೆ ಮಾಡುವ ಮಾಟವೆಲ್ಲ, ನೀರೊಳಗೆ ಅಗ್ನಿಹೋಮವನಿಕ್ಕಿದಂತೆ ಆಯಿತು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.