Index   ವಚನ - 198    Search  
 
ಗುರುಲಿಂಗಜಂಗಮದಲ್ಲಿ ಅತ್ಯಂತ ಪ್ರೇಮಿಗಳೆಂದು ಪರರ ಮುಂದೆ ತಮ್ಮ ಬಿಂಕವ ತೋರುವರು. ತೋರಿದಂತೆ ಆಚರಣೆಯ ತೋರರು. ಅದೆಂತೆಂದಡೆ : ತನ್ನ ದೀಕ್ಷೋಪದೇಶವ ಮಾಡಿದಂಥ ಗುರು ಮನೆಗೆ ಬಂದರೆ ಮನ್ನಿಸರು. ನಯನುಡಿಯ ಮಾತನಾಡರು. ಒಂದು ಹೊನ್ನು ವಸ್ತ್ರವ ಬೇಡಿದರೆ ಇಲ್ಲೆಂಬರಲ್ಲದೆ ಕೊಟ್ಟು ಸಂತೋಷಪಡಿಸುವವರಿಲ್ಲ. ಗ್ರಾಮದ ಮಧ್ಯದಲ್ಲಿ ಆವನೊಬ್ಬ ಜಾತಿಹಾಸ್ಯಕಾರನು ಬಂದು, ಡೋಲು ಡಮಾಮಿಯ ಹೊಡೆದು, ಬೊಬ್ಬಿಯ ರವಸದಿಂದ ಮಣ್ಣವರಸಿ, ರಟ್ಟಿ ಮಂಡಿಯ ತಿಕ್ಕಿ, ತೊಡೆಯ ಚಪ್ಪರಿಸಿ, ಕೋ ಎಂದು ಕೂಗಿ, ಭೂಮಿಗೆ ಕೈ ಹಚ್ಚಿ, ಲಾಗದ ಮೇಲೆ ಲಾಗ ಹೊಡೆದು, ಅಂತರಪುಟಕಿಯಲ್ಲಿ ಮೂರು ಹೊರಳಿಕೆಯ ಹೊರಳಿ, ಮುಂದೆ ಬಂದು ನಿಂತು, ಮಜುರೆಯ ಮೇಲೆ ಮಜುರೆಯ ಹೊಡೆದು, ಅವರ ಹೆಸರೆತ್ತಿ ಕೊಂಡಾಡಲು, ಅವರ ಲಾಗಕ್ಕೆ ಮೆಚ್ಚಿ ಶಾಲು ಶಕಲಾತಿ ಮೊದಲಾದ ವಸ್ತ್ರವ ಕೊಟ್ಟು, ಕಾಲತೊಡರು ಮುಂಗೈಸರಪಳಿ ಛತ್ರ ಚಾಮರ ಜಲ್ಲಿ ಮೊದಲಾದ ಚಾಜವ ಕೊಟ್ಟು, ಸಂತೋಷಪಡಿಸುವರಲ್ಲದೆ ಇಲ್ಲೆಂಬರೇ? ಇಲ್ಲೆನ್ನರಯ್ಯ. ಮತ್ತಂ, ಲಿಂಗಪೂಜೆಯ ಮಾಡೆಂದಡೆ ಎನ್ನಿಂದಾಗದೆಂಬರು. ಲಿಂಗಕ್ಕೆ ಸಕಲಪದಾರ್ಥವನರ್ಪಿಸಿ ಸಲಿಸೆಂದಡೆ ಎನ್ನಿಂದಾಗದೆಂದು, ಬಂದ ಪದಾರ್ಥವ ಲಿಂಗಕ್ಕೆ ತೋರದೆ ಬಾಯಿಗೆಬಂದಂತೆ ತಿಂಬುವರು. ಜಟ್ಟಿಂಗ ಹಿರಿವಡ್ಯಾ ಲಕ್ಕಿ ದುರ್ಗಿ ಚಂಡಿ ಮಾರಿಯ ಪೂಜಿಸೆಂದಡೆ ತನುಮನವು ಹೊಳೆಯುಬ್ಬಿದಂತೆ ಉಬ್ಬಿ, ಹೊತ್ತಾರೆ ಎದ್ದು ಪತ್ರಿ ಪುಷ್ಪವ ತಂದು, ಒಂದೊತ್ತು ಉಪವಾಸ ಮಾಡಿ, ಮೈಲಿಗೆಯ ಕಳೆದು ಮಡಿಯನುಟ್ಟು, ಮನಪೂರ್ವಕದಿಂ ಪೂಜೋಪಚಾರವ ಮಾಡಿ, ಭೂಮಿಯಲ್ಲಿ ಕಾಯಕಷ್ಟವ ಮಾಡಿ ಬೆಳೆದಂಥ ಹದಿನೆಂಟು ಜೀನಸಿನ ಧಾನ್ಯವ ತಂದು ಪಾಕ ಮಾಡಿ, ಆ ದೇವತೆಗಳಿಗೆ ನೈವೇದ್ಯವ ಕೊಟ್ಟು, ಮರಳಿ ತಾವು ಉಂಬುವರಲ್ಲದೆ, ಅಂತಪ್ಪ ದೇವತೆಗಳಿಗೆ ಕೊಡದ ಮುನ್ನವೆ ಸಾಯಂಕಾಲಪರಿಯಂತರವಾದಡೂ ಒಂದು ಬಿಂದು ಉದಕ ಒಂದಗಳನ್ನವ ಕೊಳ್ಳದೆ, ತನು-ಮನ ಬಳಲಿಸುವರಯ್ಯಾ. ಮತ್ತಂ, ಜಂಗಮಲಿಂಗವು ಹಸಿವು ತೃಷೆ ಆಪ್ಯಾಯನವಾಗಿ ಮಧ್ಯಾಹ್ನ ಸಾಯಂಕಾಲದೊಳಗೆ ಭಿಕ್ಷಕ್ಕೆ ಬಂದಡೆ, ಅನುಕೂಲವಿಲ್ಲ, ಮನೆಯೊಳಗೆ ಹಡದಾರ ಗದ್ದಲುಂಟು ಮನೆಯೊಳಗೆ ಗೃಹಸ್ಥರು ಬಂದಾರೆ, ಘನಮಾಡಿಕೊಳ್ಳಿರಯ್ಯಾ ಮುಂದಕ್ಕೆ ಎಂಬರಲ್ಲದೆ, ಅಂತಪ್ಪ ಆಪ್ಯಾಯನವಾದ ಜಂಗಮವ ಕರೆದು ಅನ್ನೋದಕವ ನೀಡಿ, ತೃಪ್ತಿಯ ಬಡಿಸುವರೆ ? ಬಡಿಸುವದಿಲ್ಲ. ಊರೊಳಗೆ ಒಬ್ಬ ಜಾರಸ್ತ್ರೀಯಳು ಉಂಡು ವೀಳ್ಯವಕೊಂಡು ಸಹಜದಲ್ಲಿ ತಮ್ಮ ಗೃಹಕ್ಕೆ ಬಂದಲ್ಲಿ ಆ ಜಾರಸ್ತ್ರೀಗೆ ಮನೆಯವರೆಲ್ಲರು ಉಣ್ಣು ಏಳು ಉಂಬೇಳೆಂದು ಆಕೆಯ ಕರವ ಪಿಡಿದು ಕರೆವರಯ್ಯಾ. ಅವಳು ಎನಗೆ ಹಸುವಿಲ್ಲೆಂದು ತಮ್ಮ ಗೃಹಕ್ಕೆ ಹೋಗಲು, ಅವಳು ಹೋದಮೇಲೆ ದೇವರಿಗೆ ಎಡಿಯ ಕಳಿಸಿದಂತೆ ಕಳುಹುವರಯ್ಯ. ಇಂತಪ್ಪ ತ್ರಿವಿಧಭ್ರಷ್ಟ ಹೊಲೆ ಮಾದಿಗರಿಗೆ ಗುರು-ಲಿಂಗ-ಜಂಗಮದ ಪ್ರೇಮಿಗಳಾದ ಸದ್ಭಕ್ತರೆಂದಡೆ, ಶಿವಜ್ಞಾನಿಗಳಾದ ಶಿವಶರಣರು ಕಂಡು ತಮ್ಮೊಳಗೆ ತಾವೇ ನಕ್ಕು ಅರಿಯದವರಂತೆ ಶಬ್ದಮುಗ್ಧರಾಗಿ ಸುಮ್ಮನೆ ಇರ್ದರು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.