Index   ವಚನ - 268    Search  
 
ಮೋರೆಯಿಲ್ಲದವರಿಗೆ ಕನ್ನಡಿಯ ತೋರಿದಂತೆ, ಕಿವಿಯಿಲ್ಲದ ಕಿವುಡಗೆ ಶಾಸ್ತ್ರವ ಹೇಳುವಂತೆ, ಮೂಗಿಲ್ಲದ ಮೂಕಂಗೆ ಮಾತು ಹೇಳುವಂತೆ, ಬಾಯಿ ಇಲ್ಲದವರಿಗೆ ಪಂಚಾಮೃತವನುಣಿಸಿದಂತೆ, ಒಲ್ಲದ ಕೂಸಿಗೆ ನೊರೆವಾಲನೆರೆದಂತೆ, ಕನ್ಯಾಕುಮಾರಿಯ ಸಂಗ ನಪುಂಸಕ ಮಾಡುವಂತೆ, ಇಂತೀ ದೃಷ್ಟಾಂತದಂತೆ ತ್ರಿವಿಧಮಲವ ಕಚ್ಚಿ, ಸಂಸಾರವಿಷಯಲಂಪಟರಾದ ತಾಮಸಜೀವಿಗಳಿಗೆ ಶಿವಾನುಭವಬೋಧೆಯ ಮಾಡಿದುದು ಒಂದೇ ನೋಡಾ. ಅಂತಪ್ಪ ಮಂಗಮೂಳರ ಮುಂದೆ ಮಾತನಾಡಲಾಗದು. ಮನದೆರದು ಮಹಾನುಭಾವಬೋಧೆಯ ಬೆಸಗೊಳ್ಳಲಾಗದು. ತಥಾಪಿ ಬಿಡೆಯಭಾವದಿಂ ಶಿವಾನುಭಾವ ಬೆಸಗೊಂಡಡೆ ಹಳ್ಳಗೊಂಡ ಹರವಿಯ ನೀರು ತುಂಬಿ ಇರಿಸಿದಂತೆ, ಹೊಳ್ಳ ಕುಟ್ಟಿ ಗಾಳಿಗೆ ತೂರಿದಂತೆ ಆಯಿತ್ತು. ಇದು ಕಾರಣ ಶಬ್ದಮುಗ್ಧನಾಗಿ ಕಲ್ಲುಮರದಂತೆ, ಪರ್ಣ ಉದುರಿದ ವೃಕ್ಷದಂತೆ, ಸುಮ್ಮನೆ ಇರ್ದನು ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.