Index   ವಚನ - 300    Search  
 
ಗುರುಪೂಜೆ ಮಾಡುವಣ್ಣಗಳ ಸೂಳೇರ ಬಾಯಿಲೋಳೆ ನೆಕ್ಕಿಸಿತ್ತು ಮಾಯೆ. ಲಿಂಗಪೂಜೆ ಮಾಡುವಣ್ಣಗಳ ಅಂಗನೆಯರ ತೊಡೆಯ ಮೂಸಿನೋಡಿಸಿತ್ತು ಮಾಯೆ. ಜಂಗಮಪೂಜೆ ಮಾಡುವಣ್ಣಗಳ ರಂಭೆಯರ ಜಾನು ಜಂಘಯಲ್ಲಿರಿಸಿತ್ತು ಮಾಯೆ. ಪಾದೋದಕ ಪ್ರಸಾದವಕೊಂಬ ಅಣ್ಣಗಳ ಮದ್ಯಪಾನ ಮಾಂಸವ ತಿನಿಸಿತ್ತು ಮಾಯೆ. ವಿಭೂತಿ ರುದ್ರಾಕ್ಷಿ ಧರಿಸುವಣ್ಣಗಳ ತಿದಿಯ ಹಿರಿಸಿ ಮುಸುಕಿಯ ಕಟ್ಟಿಸಿತ್ತು ಮಾಯೆ. ಮಂತ್ರಧ್ಯಾನಿಗಳೆಲ್ಲರ ಅಂಗನೆಯರ ಭಗಧ್ಯಾನದಲ್ಲಿರಿಸಿತ್ತು ಮಾಯೆ ಜಪತಪವ ಮಾಡುವಣ್ಣಗಳ ಮುಸುಕು ತೆಗೆದು ಸ್ತ್ರೀಯರ ಮುಖವ ನೋಡಿಸಿತ್ತು ಮಾಯೆ. ಗುರುಹಿರಿಯರೆಂಬಣ್ಣಗಳ ಹಿರಿಯ ಶೂಲಕ್ಕೆ ಇಕ್ಕಿತ್ತು ಮಾಯೆ. ವಿರಕ್ತರೆಂಬಣ್ಣಗಳ ರಂಭೇರ ಮಲ ಒಸರುವ ಪೃಷ್ಠವ ಪಿಡಿಸಿತ್ತು ಮಾಯೆ. ಪಟ್ಟದಯ್ಯಗಳು ಚರಮೂರ್ತಿ ಹಿರಿಯರು ಮಾನ್ಯರೆಂಬಣ್ಣಗಳ ರಟ್ಟೆಗೆ ಹಗ್ಗಹಚ್ಚಿ ಸ್ತ್ರೀಯರ ಮುಂದೆ ಹಿಂಡಗಟ್ಟಿ ಎಳಸಿತ್ತು ಮಾಯೆ. ವೇದಾಗಮ ಪುರಾಣ ತರ್ಕ ತಂತ್ರಗಳೆಲ್ಲ ನೋಡಿ ಹಾಡುವಣ್ಣಗಳೆಲ್ಲರ ಹೊಲೆಮಾದಿಗರ ಕಾಲು ಹಿಡಿಸಿತ್ತು ಮಾಯೆ. ಇಂತೀ ನಾನಾ ಹಾದಿ ಶ್ರುತಿಗಳ ವಾಕ್ಯವ ಕೇಳಿ ದಾನಧರ್ಮಗಳ ಮಾಡುವಣ್ಣಗಳನೆಲ್ಲರ ತಲೆಕೆಳಗಾಗಿ ಕಾಲುಮೇಲಾಗಿ ಎಂಬತ್ತುನಾಲ್ಕುಲಕ್ಷ ಯೋನಿಗಳಲ್ಲಿ ರಾಟಾಳ ತಿರುಗಿದಂತೆ ತಿರುಗಿಸಿತ್ತು ಮಾಯೆ. ಇಂತಪ್ಪ ಮಾಯೆಯ ಗೆಲುವರೆ ಆರಿಗೂ ಅಳವಲ್ಲ. ಶಿವಜ್ಞಾನಸಂಪನ್ನರಾದ ಶಿವಶರಣರೇ ಬಲ್ಲರಲ್ಲದೆ, ಮಿಕ್ಕಿನ ದೇವ ದಾನವ ಮಾನವರು ಮೊದಲಾದ ಎಲ್ಲರಿಗೂ ಇಲ್ಲ ಇಲ್ಲ ಎಂದನಯ್ಯ ವೀರಾಧಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.