Index   ವಚನ - 33    Search  
 
ಕಾಲನೆಂಬ ಜಾಲಗಾರನು ಕರ್ಮವೆಂಬ ಬಲೆಯ ಬೀಸಿ, ಸಂಸಾರಶರಧಿಯಲ್ಲಿರ್ಪ ಸಕಲಪ್ರಾಣಿಗಳೆಂಬ ಮೀನುಗಳ ಹಿಡಿದು ಕೊಲ್ಲುತ್ತಿದ್ದಾನೆ. ಕಾಮನೆಂಬ ಬೇಂಟೆಗಾರನು ಕಂಗಳ ತೋಹಿನಲ್ಲಿ ನಿಂದು, ಕಳವಳದ ಬಾಣವನೆಸೆದು ಭವವೆಂಬ ಬಲೆಯಲ್ಲಿ ಸಕಲಪ್ರಾಣಿಗಳ ಕೆಡಹಿಕೊಂಡು ಕೊಲ್ಲುತ್ತಿದ್ದಾನೆ. ಮಾಯೆಯೆಂಬ ರಕ್ಕಸಿ ಸಕಲ ಪ್ರಾಣಿಗಳ ಸಾರವ ಹೀರಿ ಹಿಪ್ಪೆಯ ಮಾಡಿ ಉಃಫೆಂದು ಊದುತಿದ್ದಾಳೆ. ಇಂತೀ ತ್ರಿವಿಧಮುಖದಲ್ಲಿ ಕಾಡುವ ನಿಮ್ಮ ಮಾಯೆಯ ಗೆಲುವಡೆ ಆರಳವಲ್ಲವಯ್ಯಾ ಅಖಂಡೇಶ್ವರಾ, ನೀವು ಕರುಣಿಸದನ್ನಕ್ಕ.