Index   ವಚನ - 34    Search  
 
ಸಿರಿವಂತರೆಂದು ಹೇಳುವವರ ದರಿದ್ರಕ್ಕೆ ಒಳಗುಮಾಡಿ ಕಾಡಿತ್ತು ನೋಡಾ ನಿಮ್ಮ ಮಾಯೆ. ನಿಃಕಾಮಿಗಳೆಂದು ಹೇಳುವವರ ಕಾಮದ ಕತ್ತಲೆಯಲ್ಲಿ ಕೆಡಹಿ ಕಾಡಿತ್ತು ನೋಡಾ ನಿಮ್ಮ ಮಾಯೆ. ಪುರುಷನ ಕಣ್ಣ ಮುಂದೆ ಸ್ತ್ರೀಯಾಗಿ ಸುಳಿದಾಡಿ ಕಾಡಿತ್ತು ನೋಡಾ ನಿಮ್ಮ ಮಾಯೆ. ಸ್ತ್ರೀಯ ಕಣ್ಣಮುಂದೆ ಪುರುಷನಾಗಿ ಸುಳಿದು ಕಾಡಿತ್ತು ನೋಡಾ ನಿಮ್ಮ ಮಾಯೆ. ಸತ್ಯವಂತರೆಂದು ಹೇಳುವವರ ಅಸತ್ಯಕ್ಕೆ ಒಳಗು ಮಾಡಿ ಕಾಡಿತ್ತು ನೋಡಾ ನಿಮ್ಮ ಮಾಯೆ. ಹಿರಿಯರೆಂದು ಹೇಳುವವರ ಕಿರಿಯತನಕ್ಕೆ ಒಳಗು ಮಾಡಿ ಕಾಡಿತ್ತು ನೋಡಾ ನಿಮ್ಮ ಮಾಯೆ. ನಿತ್ಯವೆಂದು ಹೇಳುವವರ ಅನಿತ್ಯಕ್ಕೆ ಒಳಗು ಮಾಡಿ ಕಾಡಿತ್ತು ನೋಡಾ ನಿಮ್ಮ ಮಾಯೆ. ಇಂತೀ ಜಗವೆಲ್ಲವ ನುಂಗಿ ಜಾಳಿಸುತಿರ್ಪ ನಿಮ್ಮ ಮಾಯದೇಳಿಗೆಯ ಗೆಲುವಡೆ ಆರಳವಲ್ಲ ಅಖಂಡೇಶ್ವರಾ, ನೀವು ಕರುಣೆಹುಟ್ಟಿ ಒಲಿಯದನ್ನಕ್ಕ.