ಆದಿಯಲ್ಲಿ ಶ್ರೀ ವಿಭೂತಿಯ
ಸ್ನಾನವ ಮಾಡಿದ ಬ್ರಹ್ಮಂಗೆ
ಬ್ರಹ್ಮಪದವಾಯಿತ್ತು.
ಆದಿಯಲ್ಲಿ ಶ್ರೀ ವಿಭೂತಿಯ
ಸ್ನಾನವ ಮಾಡಿದ ವಿಷ್ಣುವಿಂಗೆ
ವಿಷ್ಣುಪದವಾಯಿತ್ತು.
ಆದಿಯಲ್ಲಿ ಶ್ರೀ ವಿಭೂತಿಯ
ಸ್ನಾನವ ಮಾಡಿದ ದೇವತೆಗಳಿಗೆ
ದೇವಪದವಾಯಿತ್ತು.
ಆದಿಯಲ್ಲಿ ಶ್ರೀ ವಿಭೂತಿ
ಸ್ನಾನವ ಮಾಡಿದ ಋಷಿಗಳಿಗೆ
ಋಷಿಪದವಾಯಿತ್ತು.
ಆದಿಯಲ್ಲಿ ಶ್ರೀ ವಿಭೂತಿಯ
ಸ್ನಾನವ ಮಾಡಿದ ಗಂಧರ್ವರುಗಳಿಗೆ
ಗಂಧರ್ವಪದವಾಯಿತ್ತು.
ಆದಿಯಲ್ಲಿ ಶ್ರೀ ವಿಭೂತಿಯ
ಸ್ನಾನವ ಮಾಡಿದ ರುದ್ರಗಣರಿಗೆ
ರುದ್ರಗಣಪದವಾಯಿತ್ತು.
ಆದಿಯಲ್ಲಿ ಶ್ರೀ ವಿಭೂತಿಯ
ಸ್ನಾನವ ಮಾಡಿದ ಯಕ್ಷರಿಗೆ
ಯಕ್ಷಪದವಾಯಿತ್ತು.
ಆದಿಯಲ್ಲಿ ಶ್ರೀ ವಿಭೂತಿಯ
ಸ್ನಾನವ ಮಾಡಿದ ಕಿನ್ನರರಿಗೆ
ಕಿನ್ನರಪದವಾಯಿತ್ತು.
ಆದಿಯಲ್ಲಿ ಶ್ರೀ ವಿಭೂತಿಯ
ಸ್ನಾನವ ಮಾಡಿದ ಅಮರಗಣರಿಗೆ
ಅಮರಗಣಪದವಾಯಿತ್ತು.
ಆದಿಯಲ್ಲಿ ಶ್ರೀ ವಿಭೂತಿಯ
ಸ್ನಾನವ ಮಾಡಿದ ಪಿತೃಗಣರಿಗೆ
ಪಿತೃಗಣಪದವಾಯಿತ್ತು.
ಆದಿಯಲ್ಲಿ ಶ್ರೀ ವಿಭೂತಿಯ
ಸ್ನಾನವ ಮಾಡಿದ ಭೂತಗಣರಿಗೆ
ಭೂತಗಣಪದವಾಯಿತ್ತು.
ಅದೆಂತೆಂದೊಡೆ:
ಬ್ರಹ್ಮವಿಷ್ಣ್ವಾದಿದೇವಾ ಋಷಯೋ ಗಂಧರ್ವಾ ಯಕ್ಷಕಿನ್ನರಾಃ |
ಮರುದ್‍ಗಣಾಃ ಪಿತೃಗಣಾಃ ಸರ್ವೇ ಭೂತಗಣಾ ಅಪಿ |
ನಿತ್ಯಂ ಚ ಸರ್ವಯತ್ನೇನ ಭಸ್ಮಸ್ನಾನಂ ಪ್ರವರ್ತತೇ ||''
ಎಂದುದಾಗಿ,
ಇಂತಪ್ಪ ಶ್ರೀ ವಿಭೂತಿಯ ಮಹತ್ವವ ಕಂಡು ಕೇಳಿ ನಂಬಲರಿಯದೆ
ಗರ್ವದಿಂದೆ ಮುಂದುಗೆಟ್ಟ ಮರುಳಮಾನವರಿಗೆ
ಭವರಾಟಾಳದಲ್ಲಿ ಸತ್ತು ಸತ್ತು ಹುಟ್ಟಿ ಹುಟ್ಟಿ ಬಪ್ಪುದು
ತಪ್ಪದು ನೋಡಾ ಅಖಂಡೇಶ್ವರಾ.