Index   ವಚನ - 87    Search  
 
ಗುರುಕಾರುಣ್ಯವ ಪಡೆದು ಅಂಗದ ಮೇಲೆ ಲಿಂಗಧಾರಣವಾಗಿ, ಶ್ರೀ ವಿಭೂತಿಯ ಧರಿಸಿದ ಮಹಾತ್ಮನು ಮುಂದೆ ಶಿವನ ಜ್ಞಾನಚಕ್ಷುವಿನಿಂದುದಯಿಸಿದ ರುದ್ರಾಕ್ಷಿಯ ಧರಿಸುವ ಭೇದವೆಂತೆಂದೊಡೆ ಶಿಖಾಸ್ಥಾನದಲ್ಲಿ ಏಕಮುಖವನುಳ್ಳಂಥ ಒಂದು ರುದ್ರಾಕ್ಷಿಯ ಓಂ ಸದಾಶಿವಾಯ ನಮಃ'' ಎಂಬ ಮಂತ್ರದಿಂದ ಧಾರಣಮಾಡುವುದು. ಮಸ್ತಕದಲ್ಲಿ ಎರಡುಮುಖ ಮೂರುಮುಖ ಹನ್ನೆರಡುಮುಖಂಗಳನುಳ್ಳಂಥ ಮೂರು ರುದ್ರಾಕ್ಷಿಗಳ ಓಂ ವಹ್ನಿಸೂರ್ಯಸೋಮಾಧಿಪಾಯ ಶಿವಾಯ ನಮಃ'' ಎಂಬ ಮಂತ್ರದಿಂದ ಧಾರಣಮಾಡುವುದು. ಶಿರವ ಬಳಸಿ ಹನ್ನೊಂದುಮುಖಂಗಳನುಳ್ಳಂಥ ಮೂವತ್ತಾರು ರುದ್ರಾಕ್ಷಿಗಳ ಓಂ ಷಟ್‍ತ್ರಿಂಶತತ್ತ್ವಾತ್ಮಕಾಯ ಪರಶಿವಾಯ ನಮಃ'' ಎಂಬ ಮಂತ್ರದಿಂದ ಧಾರಣಮಾಡುವುದು. ಕರ್ಣಯುಗದಲ್ಲಿ ಐದುಮುಖ ಹತ್ತುಮುಖ ಏಳುಮುಖಂಗಳನುಳ್ಳಂಥ ಒಂದೊಂದು ರುದ್ರಾಕ್ಷಿಯ ಓಂ ಸೋಮಾಯ ನಮಃ'' ಎಂಬ ಮಂತ್ರದಿಂದ ಧಾರಣಮಾಡುವುದು. ಕಂಠಸ್ಥಾನದಲ್ಲಿ ಎಂಟುಮುಖ, ಆರುಮುಖಂಗಳನುಳ್ಳಂಥ ಮೂವತ್ತೆರಡು ರುದ್ರಾಕ್ಷಿಗಳ ``ಓಂ ತ್ರಿಯಂಬಕಕಲಾತ್ಮನೇ ಶ್ರೀಕಂಠಾಯ ನಮಃ'' ಎಂಬ ಮಂತ್ರದಿಂದ ಧಾರಣಮಾಡುವುದು. ಉರಸ್ಥಾನದಲ್ಲಿ ನಾಲ್ಕುಮುಖಂಗಳನುಳ್ಳಂಥ ಐವತ್ತುನಾಲ್ಕು ರುದ್ರಾಕ್ಷಿಗಳ ಓಂ ಶ್ರೀಕಂಠಾದಿಮುಕ್ತ್ಯಾತ್ಮಕಾಯ ಶ್ರೀ ಸರ್ವಜ್ಞಾಯ ನಮಃ'' ಎಂಬ ಮಂತ್ರದಿಂದ ಧಾರಣಮಾಡುವುದು. ಬಾಹುದ್ವಯದಲ್ಲಿ ಹದಿಮೂರು ಮುಖಂಗಳನುಳ್ಳಂಥ ಹದಿನಾರು ಹದಿನಾರು ರುದ್ರಾಕ್ಷಿಗಳ ಓಂ ಸುಖಾಸನಾದಿ ಷೋಡಶಮೂರ್ತ್ಯಾತ್ಮಕಾಯ ಶ್ರೀಕಂಠಾಯ ನಮಃ'' ಎಂಬ ಮಂತ್ರದಿಂದ ಬಲದ ತೋಳಿನಲ್ಲಿ ಧಾರಣಮಾಡುವುದು. ಓಂ ಸೋಮಕಲಾತ್ಮಕಾಯ ಸೋಮಾಯ ನಮಃ'' ಎಂಬ ಮಂತ್ರದಿಂದ ಎಡದ ತೋಳಿನಲ್ಲಿ ಧಾರಣಮಾಡುವುದು. ಮುಂಗೈ ಎರಡರಲ್ಲಿ ಒಂಬತ್ತು ಮುಖಂಗಳನುಳ್ಳಂಥ ಹನ್ನೆರಡು ಹನ್ನೆರಡು ರುದ್ರಾಕ್ಷಿಗಳ ಓಂ ದ್ವಾದಶಾದಿತ್ಯಾಕ್ಷಾಯ ಶ್ರೀ ಮಹಾದೇವಾಯ ನಮಃ'' ಎಂಬ ಮಂತ್ರದಿಂದ ಬಲದ ಮುಂಗೈಯಲ್ಲಿ ಧಾರಣಮಾಡುವುದು. ಓಂ ಕೇಶವಾದಿತ್ಯಾಯ ಉಮಾಪತಯೇ ನಮಃ'' ಎಂಬ ಮಂತ್ರದಿಂದ ಎಡದ ಮುಂಗೈಯಲ್ಲಿ ಧಾರಣಮಾಡುವುದು. ಕಕ್ಷಸ್ಥಾನದಲ್ಲಿ ಯಜ್ಞೋಪವೀತರೂಪವಾಗಿ ಹದಿನಾಲ್ಕುಮುಖಂಗಳನುಳ್ಳಂಥ ನೂರೆಂಟು ರುದ್ರಾಕ್ಷಿಗಳ ಓಂ ಶತರುದ್ರವಿದ್ಯಾಸ್ವರೂಪಾತ್ಮಕಾಯ ಶ್ರೀ ವಿಶ್ವೇಶ್ವರಾಯ ನಮಃ'' ಎಂಬ ಮಂತ್ರದಿಂದ ಧಾರಣಮಾಡುವುದು. ಇಂತೀ ಸ್ಥಾನಗಣನೆ ಮುಖಮಂತ್ರಂಗಳ ಭೇದವನರಿದು, ಶ್ರೀ ರುದ್ರಾಕ್ಷಿಯ ಧರಿಸಿದ ಶರಣ ತಾನೇ ಸಾಕ್ಷಾತ್ ಪರಶಿವನಲ್ಲದೆ ಬೇರಲ್ಲವಯ್ಯ. ಅದೆಂತೆಂದೊಡೆ: ಪರಮರಹಸ್ಯದಲ್ಲಿ- ಭಾಲೇ ತ್ರೈಪುಂಡ್ರಕಂ ಯಸ್ಯ ಗಲೇ ರುದ್ರಾಕ್ಷಮಾಲಿಕಾ | ವಕ್ತ್ರೇ ಷಡಕ್ಷರಂ ಮಂತ್ರಂ ಶಿವಃ ನಾ ಸಂಶಯಃ ||'' ಎಂದುದಾಗಿ, ಅಂತಪ್ಪ ಮಹಿಮಂಗೆ ಶರಣೆಂದವರೆ ಧನ್ಯರಯ್ಯ ಅಖಂಡೇಶ್ವರಾ.