Index   ವಚನ - 92    Search  
 
ರುದ್ರಾಕ್ಷಿಯೆಂದೊಡೆ ಸಾಕ್ಷಾತ್ ಪರಶಿವನು ತಾನೇ ನೋಡಾ. ಅಗ್ರಜನಾಗಲಿ ಅಂತ್ಯಜನಾಗಲಿ, ಮೂರ್ಖನಾಗಲಿ ಪಂಡಿತನಾಗಲಿ, ಸುಗುಣಿಯಾಗಲಿ ದುರ್ಗುಣಿಯಾಗಲಿ ಆವನಾದಡೇನು ರುದ್ರಾಕ್ಷಿಯ ಧರಿಸಿದಾಕ್ಷಣದಲ್ಲಿಯೆ ಆತ ಇಹಲೋಕದಲ್ಲಿಯೂ ರುದ್ರನೆನಿಸುವನು; ಪರಲೋಕದಲ್ಲಿಯೂ ರುದ್ರನೆನಿಸುವನು. ಅದೆಂತೆಂದೊಡೆ:ಶಿವಧರ್ಮೇ- ರುದ್ರಾಕ್ಷಾಣಿ ಸ್ವಯಂ ರುದ್ರೋ ಭವೇತ್ ರುದ್ರಾಕ್ಷಧಾರಕಂ | ರುದ್ರಾಕ್ಷಂ ಧಾರಯೇತ್ ತಸ್ಮಾದಿಹ ರುದ್ರಃ ಪರತ್ರ ಚ || ಬ್ರಾಹ್ಮಣೋ ವಾಪಿ ಚಾಂಡಾಲೋ ದುರ್ಗುಣಃ ಸುಗುಣೋಪಿ ವಾ | ತಸ್ಮಾತ್ ರುದ್ರಾಕ್ಷಕಂಠೇನ ದೇಹಾಂತೇ ತು ಶಿವಂ ವ್ರಜೇತ್ ||'' ಎಂದುದಾಗಿ, ಇದು ಕಾರಣ ರುದ್ರಾಕ್ಷಿಯ ಮಹಿಮೆಯನು ಹೇಳುವಡೆ ವೇದಶಾಸ್ತ್ರ ಪುರಾಣಗಳಿಗೆ ಅಗೋಚರವಾಗಿಪ್ಪುದಯ್ಯ ಅಖಂಡೇಶ್ವರಾ.