ಈ ಶಿವಷಡಕ್ಷರಮಂತ್ರದಿಂದೆ ಸಾನಂದಋಷಿಯು
ನರಕಜೀವಿಗಳನ್ನೆಲ್ಲ ಹರನ ಓಲಗದಲ್ಲಿರಿಸಿದನು ನೋಡಾ.
ಈ ಶಿವಷಡಕ್ಷರಮಂತ್ರದಿಂದೆ ತಿರುಜ್ಞಾನಸಂಬಂಧಿಗಳು
ಕೂನಪಾಂಡ್ಯನ ವಾದವ ಗೆದ್ದರು ನೋಡಾ.
ಈ ಷಡಕ್ಷರಮಂತ್ರದಿಂದೆ ಶಿವಜಾತಯ್ಯನ
ಶಿಷ್ಯ ಮಂತ್ರಜಾತಯ್ಯನು
ಮಹಾಬಯಲನೈದಿದನು ನೋಡಾ.
ಈ ಶಿವಷಡಕ್ಷರಮಂತ್ರದಿಂದೆ ಅಜಗಣ್ಣತಂದೆಗಳು
ನಿಜಲಿಂಗೈಕ್ಯರಾದರು ನೋಡಾ.
ಇಂತಪ್ಪ ಶಿವಷಡಕ್ಷರಮಂತ್ರವನು ಎನ್ನಂತರಂಗದ
ಅರುಹಿನ ಮನೆಯಲ್ಲಿ ಬಚ್ಚಿಟ್ಟುಕೊಂಡು
ಓಂ ನಮಃಶಿವಾಯ, ಓಂ ನಮಃಶಿವಾಯ,
ಓಂ ನಮಃಶಿವಾಯ ಎಂದೆನುತಿರ್ದೆನಯ್ಯ ಅಖಂಡೇಶ್ವರಾ.