Index   ವಚನ - 188    Search  
 
ಮುಕ್ತಿಯ ಪಡೆವೆನೆಂದು ಯುಕ್ತಿಗೆಟ್ಟು ಸಕಲ ತೀರ್ಥಕ್ಷೇತ್ರಂಗಳಿಗೆಡೆಯಾಡಿ ತೊಟ್ಟನೆ ತೊಳಲಿ ಬಳಲಿ ಬೆಂಡಾಗಲೇತಕೊ? ಒಬ್ಬ ಶಿವಭಕ್ತನ ಅಂಗಳದಲ್ಲಿ ಎಂಬತ್ತೆಂಟುಕೋಟಿ ಕ್ಷೇತ್ರಂಗಳಿರ್ಪವು. ಆತನ ಬಚ್ಚಲಲ್ಲಿ ಅರವತ್ತಾರು ಕೋಟಿ ತೀರ್ಥಂಗಳಿರ್ಪವು. ಆತನ ಕಾಯವೇ ಕೈಲಾಸ. ಆತನಂಗದಮೇಲಿರ್ಪ ಲಿಂಗವೇ ಅನಾದಿಪರಶಿವನು. ಇದು ಕಾರಣ, ಅಂತಪ್ಪ ಸದ್ ಭಕ್ತನ ಗೃಹಮಂ ಪೊಕ್ಕು, ಆತನ ದರ್ಶನ ಸ್ಪರ್ಶನವಾದಾತಂಗೆ ಅನಂತಕೋಟಿ ಭವಪಾತಕಂಗಳು ಪರಿಹಾರವಪ್ಪವು ನೋಡಾ! ಆತನ ಒಕ್ಕುಮಿಕ್ಕುದ ಕೊಂಡಾತಂಗೆ ಮುಂದೆ ಮುಕ್ತಿಯಪ್ಪುದು ತಪ್ಪದು ನೋಡಾ ಅಖಂಡೇಶ್ವರಾ.