ಇಂದು ಎನ್ನ ಮನೆಯಲ್ಲಿ ದೇವರಹಬ್ಬ ಘನವಾಯಿತ್ತು.
ನಿಮಗೆ ಹೋಗಲು ಎಡೆಯಿಲ್ಲ,
ಹೋಗಿರೆಲೆ ಕಾಲ ಕಾಮ ಮಾಯಾದಿಗಳಿರಾ.
ಮುಂಬಾಗಿಲಲ್ಲಿ ಕಾಲಾಂತಕನೆಂಬ ದೇವರ ಕುಳ್ಳಿರಿಸಿ
ಪೂಜಿಸುತಿರ್ಪರು ಎಮ್ಮವರು.
ಹಿಂಬಾಗಿಲಲ್ಲಿ ಕಾಮಾಂತಕನೆಂಬ ದೇವರ ಕುಳ್ಳಿರಿಸಿ
ಪೂಜಿಸುತಿರ್ಪರು ಎಮ್ಮವರು.
ಮೇಲು ಮನೆಯಲ್ಲಿ ಮಾಯಾಕೋಳಾಹಳನೆಂಬ
ದೇವರ ಕುಳ್ಳಿರಿಸಿ ಪೂಜಿಸುತಿರ್ಪರು ಎಮ್ಮವರು.
ಇಂತಿದನರಿಯದೆ ನೀವು ನಿಮ್ಮ ಹಳೆಯ ವಿಶ್ವಾಸದಿಂದ
ನಮ್ಮ ಮನೆಯತ್ತ ಸುಳಿದಿರಾದಡೆ
ನಮ್ಮಾಳ್ದ ಅಖಂಡೇಶ್ವರ ಕಂಡರೆ ಸೀಳಿ ಬಿಸಾಟುವನು.
ಹೋಗಿರೆಲೆ ನಿಮ್ಮ ಬಾಳುವೆಯ ಉಳುಹಿಸಿಕೊಂಡು.