Index   ವಚನ - 323    Search  
 
ಗುರುವಿಂಗಾದಡೂ ಅರುಹು ಆಚಾರ ಸತ್ಕ್ರಿಯವೇ ಬೇಕು. ಲಿಂಗಕ್ಕಾದಡೂ ಅರುಹು ಆಚಾರ ಸತ್ಕ್ರಿಯವೇ ಬೇಕು. ಜಂಗಮಕ್ಕಾದಡೂ ಅರುಹು ಆಚಾರ ಸತ್ಕ್ರಿಯವೇ ಬೇಕು. ಅದೆಂತೆನಲು: ವೀರಮಾಹೇಶ್ವರಸಂಗ್ರಹ ಗ್ರಂಥ- “ಜ್ಞಾನಮಾಚಾರಹೀನೇಷು ವೇದಾಗಮೇನ ಪಾರಗ | ದುಷ್ಟಚಾಂಡಾಲಭಾಂಡೇಷು ಯಥಾ ಭಾಗೀರಥೀಜಲಂ || ಎಂದುದಾಗಿ, ಅರುಹು ಆಚಾರ ಸತ್ಕ್ರಿಯಾಹೀನರಿಗೆ ಶಿವನು ಸ್ವಪ್ನದಲ್ಲಿ ಸುಳಿಯನು ನೋಡಾ. ಅರುಹು ಆಚಾರ ಸತ್ಕ್ರಿಯಾಸಂಪನ್ನರಾದವರಲ್ಲಿ ಪರಶಿವನಿರ್ಪನಾಗಿ, ಅರುಹುಗೆಟ್ಟು ಆಚಾರತಪ್ಪಿ ಸತ್ಕ್ರಿಯಾಹೀನರಾಗಿರ್ಪವರು ಸಲ್ಲರಯ್ಯ ಶಿವಪಥಕ್ಕೆ ಅಖಂಡೇಶ್ವರಾ.