Index   ವಚನ - 324    Search  
 
ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ ಮಲತ್ರಯಂಗಳಲ್ಲಿ ಬಿದ್ದು ಒದ್ದಾಡುವಾತ ಗುರುವಲ್ಲ. ಅಷ್ಟವಿಧಾರ್ಚನೆ ಷೋಡಶೋಪಾಚಾರಂಗಳ ಮಾಡಿ ಭಿನ್ನಫಲಪದವ ಪಡೆದು ಅನುಭವಿಸುವ ಉಪಾಧಿಭಕ್ತನ ಹಿಂದೆ ಭವಭವದಲ್ಲಿ ಎಡೆಯಾಡುವುದು ಲಿಂಗವಲ್ಲ. ಅಂಗ ಮನ ಪ್ರಾಣೇಂದ್ರಿಯಂಗಳಲ್ಲಿ ಮುಸುಕಿದ ಅಜ್ಞಾನಾಂಧಕಾರದಲ್ಲಿ ಮುಂದುಗಾಣದೆ ನಡೆದಾತ ಜಂಗಮವಲ್ಲ. ಇವರು ದೇವರೆಂದು ನಂಬಿ ಪೂಜಿಸುವಾತ ಭಕ್ತನಲ್ಲ, ಅದೇನುಕಾರಣವೆಂದೊಡೆ: ಅಂಧಕನ ಕೈಯ ಅಂಧಕ ಹಿಡಿದಂತೆ ಅರುಹು ಆಚಾರಹೀನವಾದ ಗುರುಲಿಂಗಜಂಗಮವ ದೇವರೆಂದು ಪೂಜಿಸುವ ಭಕ್ತಂಗೆ ಭವರಾಟಾಳದಲ್ಲಿ ಸತ್ತು ಸತ್ತು ಹುಟ್ಟಿ ಬಪ್ಪುದು ತಪ್ಪದಯ್ಯ ಅಖಂಡೇಶ್ವರಾ.