Index   ವಚನ - 387    Search  
 
ಶಿವಪ್ರಸಾದವನಾರೋಗಣೆಯ ಮಾಡುವಲ್ಲಿ ಕರಣಂಗಳು ಕಡೆಗೆ ತುಳುಕದಿರಬೇಕು. ಚಿತ್ತವು ಅತ್ತಿತ್ತ ಹರಿಯದಿರಬೇಕು. ಶಿವಧ್ಯಾನಪರಾಯಣನಾಗಿರಬೇಕು. ಶಿವಪ್ರಸಾದದಲ್ಲಿ ಮನವು ಮಗ್ನವಾಗಿರಬೇಕು. ಪ್ರಸಾದವೆ ಪರಬ್ರಹ್ಮವೆಂಬ ಭಾವ ಬಲಿದಿರಬೇಕು. ತುತ್ತುತುತ್ತಿಗೆ ಶಿವಮಂತ್ರವ ಉಚ್ಚರಿಸುತ್ತಿರಬೇಕು. ಶಿವಪ್ರಸಾದದ ಘನವ ಕಂಡು ಮನವು ಹಿಗ್ಗಿ ಪರಮಪರಿಣಾಮದೊಳಗೋಲಾಡುತ್ತಿರಬೇಕು. ಇಂತೀ ಭೇದವನರಿಯಬಲ್ಲಾತನೆ ಅಚ್ಚಪ್ರಸಾದಿಯಯ್ಯ ಅಖಂಡೇಶ್ವರಾ.