ಕೇಳುವ ಸಂಗೀತ, ನೋಡುವ ಸುರೂಪುಗಳ
ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು.
ವಾಸಿಸುವ ಸುಗಂಧ, ರುಚಿಸುವ ಸುರಸಂಗಳ
ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು.
ತಟ್ಟು ಮುಟ್ಟು ತಾಗು ನಿರೋಧ ಸೋಂಕು ಸಂಬಂಧಗಳ
ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು.
ಹಲ್ಲುಕಡ್ಡಿ ದರ್ಪಣ ಮೊದಲಾದ ಪದಾರ್ಥಂಗಳ
ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು.
ಚಳಿ ಮಳೆ ಗಾಳಿ ಬಿಸಿಲು ಸಿಡಿಲು ಮಿಂಚು ನೀರು ನೆಳಲುಗಳ
ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು.
ಪೃಥ್ವಿ ಗಗನ ತತ್ತ್ವತೋರಿಕೆ ಸೂರ್ಯ
ಚಂದ್ರ ಅಗ್ನಿ ತಾರೆ ಪ್ರಕಾಶಂಗಳ
ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು.
ಇಂತೀ ಲಿಂಗಾರ್ಪಿತ ಸಕೀಲವನರಿಯದೆ ಬರಿದೆ ಪ್ರಸಾದಿಗಳೆಂದು
ನುಡಿವ ನುಡಿಜಾಣರ ಕಂಡು ನಾಚಿದೆನಯ್ಯಾ
ಅಖಂಡೇಶ್ವರಾ.