ಅಪ್ಪುವೆ ಅಂಗವಾದ ಮಹೇಶ್ವರಂಗೆ ಬುದ್ಧಿಯೆ ಹಸ್ತ;
ಆ ಹಸ್ತಕ್ಕೆ ಜ್ಞಾನಶಕ್ತಿ, ಆ ಶಕ್ತಿಗೆ ಗುರುಲಿಂಗ,
ಆ ಗುರುಲಿಂಗಕ್ಕೆ ಜಿಹ್ವೇಂದ್ರಿಯವೆಂಬ ಮುಖ,
ಆ ಮುಖಕ್ಕೆ ಸುರಸವೆ ಪದಾರ್ಥ; ಆ ಪದಾರ್ಥವನು
ಜಿಹ್ವೆಯಲ್ಲಿಹ ಗುರುಲಿಂಗಕ್ಕೆ ನೈಷ್ಠಿಕಭಕ್ತಿಯಿಂದರ್ಪಿಸಿ,
ಆ ಸುರಸ ಪ್ರಸಾದವನು ಪಡೆದು ಸುಖಿಸುವಾತನೇ
ಮಹೇಶ್ವರನು ನೋಡಾ ಅಖಂಡೇಶ್ವರಾ.