Index   ವಚನ - 499    Search  
 
ಸದ್ಗುರುಪ್ರಸಾದದಿಂದೊಗೆದ ತಾರಕಬ್ರಹ್ಮದ ಅಭ್ಯಾಸವೆಂತೆನೆ; ಈ ತಾರಕಬ್ರಹ್ಮವು ನಾದವೆಂದು ಕಲೆಯೆಂದು ಬಿಂದುವೆಂದು ಮೂರುಪ್ರಕಾರಮಪ್ಪುದು. ಅವರೊಳಗೆ ಆ ಕಲೆಯೆ ಕಮಲತಂತುವಿನಂತೆ ಪರಮಸೂಕ್ಷ್ಮವಾಗಿ, ಹರಿಹಂಚಿಲ್ಲದೆ ಬ್ರಹ್ಮರಂಧ್ರಸ್ಥಾನದಲ್ಲಿ ದಿವ್ಯಪ್ರಕಾಶರೂಪದಿಂದಿಹುದು. ಮತ್ತಾ ಕಲೆಯೆ ಬಲಿದು ಅಂಗುಷ್ಠಮಾತ್ರಮಾದ ದ್ವೀಪಜ್ವಾಲೆಯಾಕರದಿಂ ಭ್ರೂಮಧ್ಯಸ್ಥಾನದಲ್ಲಿ ಕಾಣಿಸಲು ಅದೇ ನಾದವೆನಿಸುವುದು. ಬಳಿಕಾ ನಾದವೆ ಬಲಿದು ಚಂದ್ರಸೂರ್ಯರ ಪ್ರಭಾಮಂಡಲಂಗಳನೊಳಕೊಂಡು ನೇತ್ರಮಧ್ಯದೊಳಿರಲು ಅದೇ ಬಿಂದುವೆನಿಸುವುದಯ್ಯಾ ಅಖಂಡೇಶ್ವರಾ.