ಸದ್ಗುರುಕಾರುಣ್ಯವ ಪಡೆದು ಲಿಂಗಾಂಗಸಮರಸವುಳ್ಳ
ವೀರಶೈವ ಭಕ್ತ ಮಹೇಶ್ವರರೆನಿಸಿಕೊಂಡ ಬಳಿಕ
ತಮ್ಮಂಗದ ಮೇಲಣ ಲಿಂಗವು
ಷಟ್‍ಸ್ಥಾನಂಗಳಲ್ಲಿ ಭಿನ್ನವಾದಡೆ
ಆ ಲಿಂಗದಲ್ಲಿ ತಮ್ಮ ಪ್ರಾಣವ ಬಿಡಬೇಕಲ್ಲದೆ,
ಮರಳಿ ಆ ಭಿನ್ನವಾದ ಲಿಂಗವ ಧರಿಸಲಾಗದು.
ಅದೇನು ಕಾರಣವೆಂದಡೆ:
ತಾನು ಸಾಯಲಾರದೆ ಜೀವದಾಸೆಯಿಂದೆ
ಆ ಭಿನ್ನವಾದ ಲಿಂಗವ ಧರಿಸಿದಡೆ
ಮುಂದೆ ಸೂರ್ಯಚಂದ್ರರುಳ್ಳನ್ನಕ್ಕರ
ನರಕಸಮುದ್ರದಲ್ಲಿ ಬಿದ್ದು ಮುಳುಗಾಡುವ
ಪ್ರಾಪ್ತಿಯುಂಟಾದ ಕಾರಣ,
ಇದಕ್ಕೆ ಸಾಕ್ಷಿ:
ಶಿರೋ ಯೋನಿರ್ಗೋಮುಖಂ ಚ ಮಧ್ಯಂ ವೃತ್ತಂ ಚ ಪೀಠಕಂ |
ಷಟ್‍ಸ್ಥಾನೇ ಛಿದ್ರಯೋಗೇ ತು ತಲ್ಲಿಂಗಂ ನೈವ ಧಾರಯೇತ್ |
ತಥಾಪಿ ಧಾರಣಾತ್ ಯೋಗೀ ರೌರವಂ ನರಕಂ ವ್ರಜೇತ್ ||''
-ಸೂಕ್ಷ್ಮಾಗಮ.
ಇಂತಪ್ಪ ನರಕಜೀವಿಗಳ ಎನ್ನತ್ತ ತೋರದಿರಯ್ಯಾ
ಅಖಂಡೇಶ್ವರಾ.