Index   ವಚನ - 567    Search  
 
ಸಕಲ ಗಣಂಗಳು ಸಾಕ್ಷಿಯಾಗಿ ಶ್ರೀಗುರುದೇವನು ಕರಸ್ಥಲಕ್ಕೆ ಕರುಣಿಸಿಕೊಟ್ಟ ಇಷ್ಟಲಿಂಗದಲ್ಲಿ ನಿಷ್ಠೆನಿಬ್ಬೆರಗಾಗಿ, ಶರಣಸತಿ ಲಿಂಗಪತಿ ಭಾವಬಿಡದೆ ಆಚರಿಸುವ ಲಿಂಗವು ಓಸರಿಸಿ ಹೋದಡೆ, ಆ ಲಿಂಗದಲ್ಲಿ ತನ್ನ ಪ್ರಾಣತ್ಯಾಗವ ಮಾಡಬೇಕಲ್ಲದೆ ಜೀವನ ಕಕ್ಕುಲಾತಿಯಿಂದುಳಿಯಲಾಗದು. ಮರಳಿ ಮತ್ತೊಂದು ಲಿಂಗವ ಧರಿಸಲಾಗದು. ಅದೇನು ಕಾರಣವೆಂದಡೆ: ಕಾಷ್ಠದಲ್ಲಿ ಅಗ್ನಿಯಿರ್ಪುದಲ್ಲದೆ ಕರಿಗೊಂಡ ಇದ್ದಲಿಯಲ್ಲಿ ಅಗ್ನಿಯಿರ್ಪುದೇ? ಇಂತೀ ದೃಷ್ಟದಂತೆ, ಮುನ್ನ ಗುರೂಪದೇಶವಿದ್ದ ದೇಹದಲ್ಲಿ ಶಿವಕಳೆಯಿರ್ಪುದಲ್ಲದೆ, ಗುರೂಪದೇಶವಾಗಿ ಲಿಂಗವ್ರತವನಾಚರಿಸಿ ಮರಳಿ ಲಿಂಗಬಾಹ್ಯ ವ್ರತಗೇಡಿಯಾದ ದೇಹದಲ್ಲಿ ಪರಮಶಿವಕಳೆಯೆಲ್ಲಿಯದೊ? ಆ ಶಿವಕಳೆಯಿಲ್ಲದ ದೇಹಕ್ಕೆ ಮರಳಿ ಲಿಂಗಧಾರಣವಾದಡೆಯು ಆ ಲಿಂಗ ಪ್ರೇತಲಿಂಗವು; ಅವ ಭೂತಪ್ರಾಣಿ. ಆ ಲಿಂಗದ ಪೂಜೆಯ ಎಷ್ಟು ದಿನ ಮಾಡಿದಡೆಯು ಫಲವಿಲ್ಲ; ಮುಂದೆ ಮುಕ್ತಿಯಿಲ್ಲ. ಅವಗೆ ರಾಜನರಕ ಪ್ರಾಪ್ತಿಯಾಗಿರ್ಪುದು ನೋಡಾ. ಇದಕ್ಕೆ ಸಾಕ್ಷಿ: ``ಲಿಂಗಬಾಹ್ಯಾತ್ ವ್ರತಭ್ರಷ್ಟಃ ಪುನರ್ಲಿಂಗಂ ನ ಧಾರಯೇತ್ | ತತ್‍ಪೂಜಾ ನಿಷ್ಫಲಾ ಚೈವ ರೌರವಂ ನರಕಂ ವ್ರಜೇತ್ || ಮತ್ತಂ, ``ಪ್ರೇತಲಿಂಗೇನ ಸಂಸ್ಕಾರೇ ಭೂತಪ್ರಾಣೇ ನ ಜಾಯತೇ | ಪ್ರಭಾತೇ ತನ್ಮುಖಂ ದೃಷ್ಟ್ವಾ ಕೋಟಿ ಜನ್ಮಸು ಸೂಕರಃ ||'' ಎಂದುದಾಗಿ, ಇಂತಪ್ಪ ಲಿಂಗಬಾಹ್ಯ ವ್ರತಭ್ರಷ್ಟನ ಮುಖವ ಪ್ರಾತಃಕಾಲದಲ್ಲಿ ನೊಡಿದಾತಂಗೆ ಕೋಟಿವೇಳೆ ಶುನಿ ಸೂಕರನ ಬಸುರಲ್ಲಿ ಬಪ್ಪುದು ತಪ್ಪದು ನೋಡಾ ಅಖಂಡೇಶ್ವರಾ.