Index   ವಚನ - 568    Search  
 
ಲಿಂಗ ಛಿನ್ನ ಭಿನ್ನವಾದಡೆ ಸ್ಥೂಲಸೂಕ್ಷ್ಮವನರಿಯಬೇಕು. ಸ್ಥೂಲವಾವುದು ಸೂಕ್ಷ್ಮವಾವುದು ಎಂದಡೆ: ಲಿಂಗದ ಶಕ್ತಿಪೀಠದಲ್ಲಿ ಅಕ್ಕಿಯ ತೂಕ ಮೇಣವನೊತ್ತಿ ನೋಡಿದಲ್ಲಿ ಆ ಮೇಣ ಒಳಗಾದಡೆ ಸ್ಥೂಲ, ಆ ಮೇಣ ಹೆಚ್ಚಾದಡೆ ಸೂಕ್ಷ್ಮ ಮತ್ತಂ, ಲಿಂಗದ ಕಟಿಯಲ್ಲಿ ಅರ್ಧ ಅಕ್ಕಿಯ ತೂಕ ಮೇಣವನು ಒತ್ತಿ ನೋಡಿದಲ್ಲಿ ಆ ಮೇಣ ಒಳಗಾದಡೆ ಸ್ಥೂಲ, ಆ ಮೇಣ ಹೆಚ್ಚಾದಡೆ ಸೂಕ್ಷ್ಮ. ಮತ್ತಂ, ಲಿಂಗದ ವರ್ತುಳ ಗೋಮುಖದಲ್ಲಿ ಅರ್ಧ ಅಕ್ಕಿಯ ಸರಿಭಾಗವ ಮಾಡಿದಲ್ಲಿ ಗಿರ್ದವೆನಿಸಿತ್ತು. ಆ ಗಿರ್ದ ಅಕ್ಕಿಯ ತೂಕ ಮೇಣವನ್ನು ಒತ್ತಿ ನೋಡಿದಲ್ಲಿ ಆ ಮೇಣ ಒಳಗಾದಡೆ ಸ್ಥೂಲ, ಆ ಮೇಣ ಹೆಚ್ಚಾದಡೆ ಸೂಕ್ಷ್ಮ. ಮತ್ತಂ, ಲಿಂಗದ ನಾಳ ಗೋಳಕದಲ್ಲಿ ಎಳ್ಳಿನ ತೂಕ ಮೇಣವನ್ನು ಒತ್ತಿ ನೋಡಿದಲ್ಲಿ ಆ ಮೇಣ ಒಳಗಾದಡೆ ಸ್ಥೂಲ, ಆ ಮೇಣ ಹೊರಗಾದಡೆ ಸೂಕ್ಷ್ಮ. ಮತ್ತಂ, ಲಿಂಗದ ಮಸ್ತಕದಿಂದೆ ಕೆಳಗಣ ಪೀಠಪರಿಯಂತರವಾಗಿ ಕೂದಲು ಮುಳುಗುವಷ್ಟು ಸೀಳಿದಡೆ ಸ್ಥೂಲ, ಆ ಕೂದಲು ಹೆಚ್ಚಾದಡೆ ಸೂಕ್ಷ್ಮ. ಈ ಉಭಯಾರ್ಥವ ತಿಳಿದು ಸೂಕ್ಷ್ಮವಾದಡೆ ಮುನ್ನಿನಂತೆ ಧರಿಸಿಕೊಳ್ಳಬೇಕು. ಸ್ಥೂಲವಾದಡೆ ಆ ಲಿಂಗದಲ್ಲಿ ಐಕ್ಯವಾಗಬೇಕು. ಅದೆಂತೆಂದೊಡೆ: ವ್ರೀಹಿ ವ್ರೀಹ್ಯರ್ಧ ವಿಚ್ಛಿನ್ನಂ ಕೇಶಗ್ರಾಹ್ಯಂ ಪ್ರಮಾದತಃ | ಪೀಠಾದಿ ಲಿಂಗಪರ್ಯಂತಂ ತ್ಯಜೇತ್ ಪ್ರಾಣಾನ್ ನಗಾತ್ಮಜೇ ||'' ಮತ್ತಂ; ತಂಡುಲಾರ್ಧಂ ಪೀಠಮಧ್ಯಂ ತದರ್ಧಂ ವೃತ್ತಗೋಮುಖಂ | ತಿಲಮಾತ್ರ ಯೋನಿಲಿಂಗಂ ತದಾಧಿಕ್ಯಂ ತ್ಯಜೇದಸೂನ್ ||'' ಎಂದುದಾಗಿ, ಇಂತಪ್ಪ ಲಿಂಗೈಕ್ಯರಾದ ಮಹಾಶರಣರು ಮೂರುಲೋಕಕ್ಕೆ ಅಧಿಕರು ನೋಡಾ ಅಖಂಡೇಶ್ವರಾ.