ಶೀಲ ಶೀಲವೆಂದು ನುಡಿವುತಿರ್ಪರೆಲ್ಲರು.
ಶೀಲದ ಹೊಲಬನಾರೂ ಅರಿಯರಲ್ಲ.
ಕೆರೆ ಬಾವಿ ಹಳ್ಳ ಕೊಳ್ಳ ಹೊಳೆಗಳ
ನೀರ ಬಳಸದಿರ್ದಡೆ ಶೀಲವೆ?
ಕೊಡಕ್ಕೆ ಪಾವಡವ ಹಾಕಿ
ಚಿಲುಮೆಯ ಶೀತಳವ ತಂದಡೆ ಶೀಲವೆ?
ಒಳ್ಳೆ ಭಂಗಿ ಉಳ್ಳೆ ನುಗ್ಗೆಯ ಬಿಟ್ಟಡೆ ಶೀಲವೆ?
ಬೆಳೆದ ಬೆಳೆಸು ಕಾಯಿಹಣ್ಣುಗಳ ಬಿಟ್ಟಡೆ ಶೀಲವೆ?
ಉಪ್ಪು ಎಣ್ಣೆ ತುಪ್ಪ ಹಾಲು ಇಂಗು ಮೆಣಸು
ಅಡಿಕೆ ಬೆಲ್ಲಗಳ ಬಿಟ್ಟಡೆ ಶೀಲವೆ?
ಪರಪಾಕವ ಬಿಟ್ಟು ಸ್ವಯಪಾಕದಲ್ಲಿರ್ದಡೆ ಶೀಲವೆ? ಅಲ್ಲಲ್ಲ.
ಭವಿಕಾಣಬಾರದಂತಿರ್ದಡೆ ಶೀಲವೆ? ಅಲ್ಲಲ್ಲ.
ಅದೇನು ಕಾರಣವೆಂದೊಡೆ:
ಇಂತಿವೆಲ್ಲವು ಹೊರಗಣ ವ್ಯವಹಾರವು.
ಇನ್ನು ಅಂತರಂಗದ ಅರಿಷಡ್ವರ್ಗಂಗಳೆಂಬ
ಭವಿಯ ಕಳೆಯಲಿಲ್ಲ.
ಮಾಯಾಮೋಹವೆಂಬ ಒಳ್ಳೆ ಭಂಗಿ
ಉಳ್ಳೆ ನುಗ್ಗೆಯ ಬಿಡಲಿಲ್ಲ.
ಸಂಸಾರವಿಷಯರಸವೆಂಬ ಹಳ್ಳ ಕೊಳ್ಳ
ಕೆರೆ ಬಾವಿಗಳ ನೀರ ನೀಗಲಿಲ್ಲ.
ಅಷ್ಟಮದಂಗಳೆಂಬ ಉಪ್ಪು ಎಣ್ಣೆ ತುಪ್ಪ ಹಾಲು
ಇಂಗು ಮೆಣಸು ಅಡಿಕೆ ಬೆಲ್ಲಗಳ ಬಿಡಲಿಲ್ಲ.
ಸಕಲ ಕರಣಂಗಳೆಂಬ ಬೆಳಸು ಫಲಂಗಳ ಬಿಡಲಿಲ್ಲ.
ಮನವೆಂಬ ಕೊಡಕ್ಕೆ ಮಂತ್ರವೆಂಬ ಪಾವಡವ ಮುಚ್ಚಿ
ಚಿತ್‍ಕೋಣವೆಂಬ ಚಿಲುಮೆಯಲ್ಲಿ
ಚಿದಾಮೃತವೆಂಬ ಶೀತಳವ ತಂದು
ಚಿನ್ಮಯಲಿಂಗಕ್ಕೆ ಅಭಿಷೇಕವ ಮಾಡಲಿಲ್ಲ.
ಇಂತೀ ಅಂತರಂಗದ ಪದಾರ್ಥಂಗಳ ಬಿಟ್ಟು
ಮುಕ್ತಿಯ ಪಡೆವೆನೆಂಬ ಯುಕ್ತಿಗೇಡಿಗಳಿಗೆ
ಭವಬಂಧನಂಗಳು ಹಿಂಗಲಿಲ್ಲ,
ಜನನಮರಣಂಗಳು ಜಾರಲಿಲ್ಲ,
ಸಂಸಾರದ ಮಾಯಾಮೋಹವ ನೀಗಲಿಲ್ಲ.
ಇಂತಪ್ಪ ಅಜ್ಞಾನಜೀವಿಗಳ ವಿಧಿಯೆಂತಾಯಿತ್ತೆಂದಡೆ:
ಹುತ್ತದೊಳಗಣ ಹಾವ ಕೊಲುವೆನೆಂದು
ಮೇಲೆ ಹುತ್ತವ ಬಡಿದ
ಅರೆಮರುಳನಂತಾಯಿತ್ತು ನೋಡಾ
ಅಖಂಡೇಶ್ವರಾ.
Art
Manuscript
Music
Courtesy:
Transliteration
Śīla śīlavendu nuḍivutirparellaru.
Śīlada holabanārū ariyaralla.
Kere bāvi haḷḷa koḷḷa hoḷegaḷa
nīra baḷasadirdaḍe śīlave?
Koḍakke pāvaḍava hāki
cilumeya śītaḷava tandaḍe śīlave?
Oḷḷe bhaṅgi uḷḷe nuggeya biṭṭaḍe śīlave?
Beḷeda beḷesu kāyihaṇṇugaḷa biṭṭaḍe śīlave?
Uppu eṇṇe tuppa hālu iṅgu meṇasu
aḍike bellagaḷa biṭṭaḍe śīlave?
Parapākava biṭṭu svayapākadallirdaḍe śīlave? Allalla.
Bhavikāṇabāradantirdaḍe śīlave? Allalla.
Adēnu kāraṇavendoḍe:
Intivellavu horagaṇa vyavahāravu.
Innu antaraṅgada ariṣaḍvargaṅgaḷemba
bhaviya kaḷeyalilla.
Māyāmōhavemba oḷḷe bhaṅgi
uḷḷe nuggeya biḍalilla.
Sansāraviṣayarasavemba haḷḷa koḷḷa
kere bāvigaḷa nīra nīgalilla.
Aṣṭamadaṅgaḷemba uppu eṇṇe tuppa hālu
iṅgu meṇasu aḍike bellagaḷa biḍalilla.
Sakala karaṇaṅgaḷemba beḷasu phalaṅgaḷa biḍalilla.
Manavemba koḍakke mantravemba pāvaḍava mucci
citkōṇavemba cilumeyalli
cidāmr̥tavemba śītaḷava tandu
cinmayaliṅgakke abhiṣēkava māḍalilla.
Intī antaraṅgada padārthaṅgaḷa biṭṭu
muktiya paḍevenemba yuktigēḍigaḷige
bhavabandhanaṅgaḷu hiṅgalilla,
jananamaraṇaṅgaḷu jāralilla,
sansārada māyāmōhava nīgalilla.
Intappa ajñānajīvigaḷa vidhiyentāyittendaḍe:
Huttadoḷagaṇa hāva koluvenendu
mēle huttava baḍida
aremaruḷanantāyittu nōḍā
akhaṇḍēśvarā.