Index   ವಚನ - 629    Search  
 
ಚರಣದೊಳಗೆ ಚರಣವಿಟ್ಟು ನಡೆವ ಭೇದವು ನಿಮ್ಮ ಶರಣರಿಗಲ್ಲದೆ ಉಳಿದವರಿಗಳವಡದು ನೋಡಾ. ಕರದೊಳಗೆ ಕರವನಿಟ್ಟು ಮುಟ್ಟುವ ಭೇದವು ನಿಮ್ಮ ಶರಣರಿಗಲ್ಲದೆ ಉಳಿದವರಿಗಳವಡದು ನೋಡಾ. ಘ್ರಾಣದೊಳಗೆ ಘ್ರಾಣವನಿಟ್ಟು ವಾಸಿಸುವ ಭೇದವು ನಿಮ್ಮ ಶರಣರಿಗಲ್ಲದೆ ಉಳಿದವರಿಗಳವಡದು ನೋಡಾ. ಜಿಹ್ವೆಯೊಳಗೆ ಜಿಹ್ವೆಯನಿಟ್ಟು ರುಚಿಸುವ ಭೇದವು ನಿಮ್ಮ ಶರಣರಿಗಲ್ಲದ ಉಳಿದವರಿಗಳವಡದು ನೋಡಾ. ಕಂಗಳೊಳಗೆ ಕಂಗಳನಿಟ್ಟು ನೋಡುವ ಭೇದವು ನಿಮ್ಮ ಶರಣರಿಗಲ್ಲದೆ ಉಳಿದವರಿಗಳವಡದು ನೋಡಾ. ಕಿವಿಯೊಳಗೆ ಕಿವಿಯನಿಟ್ಟು ಕೇಳುವ ಭೇದವು ನಿಮ್ಮ ಶರಣರಿಗಲ್ಲದೆ ಉಳಿದವರಿಗಳವಡದು ನೋಡಾ. ಮನದೊಳಗೆ ಮನವನಿಟ್ಟು ನೆನೆವ ಭೇದವು ನಿಮ್ಮ ಶರಣರಿಗಲ್ಲದೆ ಉಳಿದವರಿಗಳವಡದು ನೋಡಾ. ಭಾವದೊಳಗೆ ಭಾವವನಿಟ್ಟು ಸುಳಿವ ಭೇದವು ನಿಮ್ಮ ಶರಣ ಸಂಗನಬಸವಣ್ಣ ಪ್ರಭುವಿನ ಸಂತತಿಗಳಿಗಲ್ಲದೆ ಉಳಿದವರಿಗಳವಡದು ನೋಡಾ ಅಖಂಡೇಶ್ವರಾ.