Index   ವಚನ - 637    Search  
 
ಶರಣ ಗಮನಿಯಾದಡೆ ಕಿರಿದೆಂಬರು, ಶರಣ ನಿರ್ಗಮನಿಯಾದಡೆ ಹಿರಿದೆಂಬರು, ನಾವಿದನರಿಯೆವಯ್ಯಾ. ಶರಣ ಆಶ್ರಮವಂತನಾದಡೆ ಕಿರಿದೆಂಬರು, ಶರಣ ನಿರಾಶ್ರಮವಂತನಾದಡೆ ಹಿರಿದೆಂಬರು, ನಾವಿದನರಿಯೆವಯ್ಯಾ ಶರಣ ಸರ್ವವ್ಯಾಪಾರಿಯಾದಡೆ ಕಿರಿದೆಂಬರು, ಶರಣ ನಿರ್ವ್ಯಾಪಾರಿಯಾದಡೆ ಹಿರಿದೆಂಬರು, ನಾವಿದನರಿಯೆವಯ್ಯಾ. ಶರಣ ಸಕಲಭೋಗೋಪಭೋಗಿಯಾದಡೆ ಕಿರಿದೆಂಬರು, ಶರಣ ನಿರ್ಭೋಗಿಯಾದಡೆ ಹಿರಿದೆಂಬರು, ನಾವಿದನರಿಯೆವಯ್ಯಾ. ಹುರಿದ ಬೀಜ ಮರಳಿ ಹುಟ್ಟಬಲ್ಲುದೆ? ಬೆಂದ ನುಲಿ ಮರಳಿ ಕಟ್ಟುವಡೆವುದೆ? ಹುಟ್ಟುಗೆಟ್ಟ ಶರಣ ಸಟೆಯ ದೇಹವ ಧರಿಸಿ ಸಾಕಾರವೆನಿಸಿ ಲೋಕದೊಳಡಗಿರ್ದಡೇನು ಲೋಕದಂತಾತನೆ? ಅಲ್ಲಲ್ಲ. ಆತನ ಪರಿ ಬೇರೆ ಕಾಣಿರೊ ಅದೆಂತೆಂದೊಡೆ: ಬಿರಿಸಿನೊಳಗಣ ಮದ್ದು ಅಗ್ನಿಯ ಸೋಂಕಿ ಅಗ್ನಿಯ ಸ್ವರೂಪವಾಗಿ ತೋರುವಂತೆ, ಆ ಶರಣನ ತನುಮನಭಾವ ಸರ್ವಕರಣೇಂದ್ರಿಯಗಳೆಲ್ಲ ಲಿಂಗವನಪ್ಪಿ ಲಿಂಗಮಯವಾಗಿ ತೋರುತಿರ್ಪವಾಗಿ, ಆತ ಆವಾವ ಕ್ರಿಯೆಯಲ್ಲಿರ್ದಡೇನು, ಆವಾವ ಆಚಾರದಲ್ಲಿರ್ದಡೇನು, ಆವಾವ ಭೋಗದಲ್ಲಿರ್ದಡೇನು, ಕುಂದು ಕೊರತೆಯಿಲ್ಲ, ಹಿಂದೆ ಶಂಕೆಯಿಲ್ಲ, ಮುಂದೆ ಜನ್ಮವಿಲ್ಲ. ಆ ಶರಣನು ಎಂತಿರ್ದಂತೆ ಸಹಜಪರಬ್ರಹ್ಮವೆ ಆಗಿರ್ಪನು ನೋಡಿರೊ ನಮ್ಮ ಅಖಂಡೇಶ್ವರಲಿಂಗದಲ್ಲಿ.