ಕನ್ನಡಿಯ ನೋಡುವಲ್ಲಿ ಪ್ರತಿರೂಪು ಕಾಣುತಿರ್ಪುದು.
ಆ ನೋಟವನುಳಿದಲ್ಲಿ ಆ ಪ್ರತಿರೂಪು
ನಿಜರೂಪಿನಲ್ಲಿ ಅಡಗುವಂತೆ
ಅನುಪಮಬ್ರಹ್ಮದಲ್ಲಿ ನೆನಹುದೋರಿ ಚಿತ್ತೆನಿಸಿತ್ತು.
ಆ ಚಿತ್ತಿನಿಂದೆ ಚಿನ್ನಾದ ಚಿದ್ಬಿಂದು
ಚಿತ್ಕಳೆಗಳೊಗೆದುವು.
ಆ ಚಿನ್ನಾದ ಚಿದ್ಬಿಂದು ಚಿತ್ಕಳೆಗಳು
ಆ ಮೂಲ ಚಿದ್ ಸ್ವರೂಪನಾದ ಶರಣಂಗೆ ದೇಹ
ಪ್ರಾಣಾತ್ಮಂಗಳಾಗಿ
ಲಿಂಗಕ್ಕೆ ಪದಾರ್ಥಂಗಳಾಗಿರ್ಪವು.
ಆ ಪದಾರ್ಥಂಗಳು ಲಿಂಗಮುಖಕ್ಕೆ ಸಮವೇಧಿಸಿ
ಆ ಚಿತ್ತು ಚಿದ್ ಘನವ ಬೆರೆಯಲೊಡನೆ
ಮುನ್ನಿನಂತೆ ಏಕವಾಯಿತ್ತಯ್ಯಾ ಅಖಂಡೇಶ್ವರಾ.