Index   ವಚನ - 706    Search  
 
ಪೃಥ್ವಿ ಅಡಗುವುದಕ್ಕೆ ಅಪ್ಪುವೆ ಆಶ್ರಯವಾಗಿರ್ಪುದು. ಆ ಅಪ್ಪು ಅಡಗುವುದಕ್ಕೆ ಅಗ್ನಿಯೆ ಆಶ್ರಯವಾಗಿರ್ಪುದು. ಆ ಅಗ್ನಿ ಅಡಗುವುದಕ್ಕೆ ವಾಯುವೆ ಆಶ್ರಯವಾಗಿರ್ಪುದು. ಆ ವಾಯು ಅಡಗುವುದಕ್ಕೆ ಆಕಾಶವೆ ಆಶ್ರಯವಾಗಿರ್ಪುದು. ಆ ಆಕಾಶ ಅಡಗುವುದಕ್ಕೆ ಆತ್ಮವೆ ಆಶ್ರಯವಾಗಿರ್ಪುದು. ಆ ಆತ್ಮ ಅಡಗುವುದಕ್ಕೆ ಆದಿಯೆ ಆಶ್ರಯವಾಗಿರ್ಪುದು. ಆ ಆದಿ ಅಡಗುವುದಕ್ಕೆ ಅನಾದಿಯೆ ಆಶ್ರಯವಾಗಿರ್ಪುದು. ಆ ಅನಾದಿ ಅಡಗುವುದಕ್ಕೆ ಶೂನ್ಯವೆ ಆಶ್ರಯವಾಗಿರ್ಪುದು. ಆ ಶೂನ್ಯ ಅಡಗುವುದಕ್ಕೆ ನಿರವಯವೆ ಆಶ್ರಯವಾಗಿರ್ಪುದು. ಆ ನಿರವಯ ಅಡಗುವುದಕ್ಕೆ ನಿಜವೆ ಆಶ್ರಯವಾಗಿರ್ಪುದು. ಆ ನಿಜ ಅಡಗುವುದಕ್ಕೆ ಅಖಂಡೇಶ್ವರಾ, ನಿಮ್ಮ ಶರಣನ ಪರಮ ಹೃದಯಕಮಲವೆ ಆಶ್ರಯವಾಗಿರ್ಪುದಯ್ಯಾ.