ಅನುಪಮ ಶರಣನ ನೆನಹಿನ ಕೊನೆಯಲ್ಲಿ ಘನಲಿಂಗವು.
ಆ ಘನಲಿಂಗದ ನೆನಹಿನ ಕೊನೆಯಲ್ಲಿ ನಿರವಯವು.
ಆ ನಿರವಯದ ನೆನಹಿನ ಕೊನೆಯಲ್ಲಿ ನಿರಾಲಂಬವು.
ಆ ನಿರಾಲಂಬದ ನೆನಹಿನ ಕೊನೆಯಲ್ಲಿ ನಿರಾಳವು.
ಆ ನಿರಾಳದ ನೆನಹಿನ ಕೊನೆಯಲ್ಲಿ ಆದಿಮಹಾಲಿಂಗವು.
ಆ ಆದಿ ಮಹಾಲಿಂಗದ ನೆನಹಿನ ಕೊನೆಯಲ್ಲಿ ಚಿತ್‍ಶಕ್ತಿ.
ಆ ಚಿತ್‍ಶಕ್ತಿಯ ನೆನಹಿನ ಕೊನೆಯಲ್ಲಿ ಪರಮೇಶ್ವರನು.
ಆ ಪರಮೇಶ್ವರನ ನೆನಹಿನ ಕೊನೆಯಲ್ಲಿ ಪರಾಶಕ್ತಿ.
ಆ ಪರಾಶಕ್ತಿಯ ನೆನಹಿನ ಕೊನೆಯಲ್ಲಿ ಸದಾಶಿವನು.
ಆ ಸದಾಶಿವನ ನೆನಹಿನ ಕೊನೆಯಲ್ಲಿ ಆದಿಶಕ್ತಿ.
ಆ ಆದಿಶಕ್ತಿಯ ನೆನಹಿನ ಕೊನೆಯಲ್ಲಿ ಈಶ್ವರನು.
ಆ ಈಶ್ವರನ ನೆನಹಿನ ಕೊನೆಯಲ್ಲಿ ಇಚ್ಛಾಶಕ್ತಿ.
ಆ ಇಚ್ಛಾಶಕ್ತಿಯ ನೆನಹಿನ ಕೊನೆಯಲ್ಲಿ ಮಹೇಶ್ವರನು.
ಆ ಮಹೇಶ್ವರನ ನೆನಹಿನ ಕೊನೆಯಲ್ಲಿ ಜ್ಞಾನಶಕ್ತಿ.
ಆ ಜ್ಞಾನಶಕ್ತಿಯ ನೆನಹಿನ ಕೊನೆಯಲ್ಲಿ ಶ್ರೀರುದ್ರಮೂರ್ತಿ.
ಆ ಶ್ರೀರುದ್ರಮೂರ್ತಿಯ ನೆನಹಿನ ಕೊನೆಯಲ್ಲಿ ಕ್ರಿಯಾಶಕ್ತಿ.
ಆ ಕ್ರಿಯಾಶಕ್ತಿಯ ನೆನಹಿನ ಕೊನೆಯಲ್ಲಿ ವಿಷ್ಣುವು
ಆ ವಿಷ್ಣುವಿನ ನೆನಹಿನ ಕೊನೆಯಲ್ಲಿ ಮಹಾಲಕ್ಷ್ಮಿ.
ಆ ಮಹಾಲಕ್ಷ್ಮಿಯ ನೆನಹಿನ ಕೊನೆಯಲ್ಲಿ ಬ್ರಹ್ಮನು.
ಆ ಬ್ರಹ್ಮನ ನೆನಹಿನ ಕೊನೆಯಲ್ಲಿ ಸರಸ್ವತಿ.
ಆ ಸರಸ್ವತಿಯ ನೆನಹಿನ ಕೊನೆಯಲ್ಲಿ ಸಕಲ ಚರಾಚರಂಗಳು.
ಇಂತಿವೆಲ್ಲವು ಶರಣನ ನೆನಹುದೋರಿದಲ್ಲಿಯೇ ತೋರುತಿರ್ಪವು,
ಆ ಶರಣನ ನೆನಹು ನಿಂದಲ್ಲಿಯೇ ಅಡಗುತಿರ್ಪುವಾಗಿ,
ಅಖಂಡೇಶ್ವರಾ, ನಿಮ್ಮ ಶರಣನು ಘನಕ್ಕೆ ಘನಮಹಿಮ,
ವಾಙ್ಮನಕ್ಕಗೋಚರನು, ಉಪಮೆಗೆ
ಉಪಮಾತೀತನು ನೋಡಾ.