Index   ವಚನ - 708    Search  
 
ಆಕಾಶದಲ್ಲಿ ತೋರಿದ ಇಂದ್ರಧನು ಅಡಗುವುದಕ್ಕೆ ಆಕಾಶವೆ ಆಶ್ರಯವಲ್ಲದೆ ಬೇರೆ ಆಶ್ರಯವುಂಟೆ ಅಯ್ಯಾ? ಗಾಳಿಯಲ್ಲಿ ತೋರಿದ ಸುಳಿಗಾಳಿ ಅಡಗುವುದಕ್ಕೆ ಆ ಗಾಳಿಯೆ ಆಶ್ರಯವಲ್ಲದೆ ಬೇರೆ ಆಶ್ರಯವುಂಟೆ ಅಯ್ಯಾ? ಅಗ್ನಿಯಿಂದ ತೋರಿದ ಕಿಡಿಗಳು ಅಡಗುವುದಕ್ಕೆ ಆ ಅಗ್ನಿಯೆ ಆಶ್ರಯವಲ್ಲದೆ ಬೇರೆ ಆಶ್ರಯವುಂಟೆ ಅಯ್ಯಾ? ಸಮುದ್ರದಲ್ಲಿ ತೋರಿದ ನೊರೆತೆರೆ ತುಂತುರ್ವನಿ ಅಡಗುವುದಕ್ಕೆ ಆ ಸಮುದ್ರವೆ ಆಶ್ರಯವಲ್ಲದೆ ಬೇರೆ ಆಶ್ರಯವುಂಟೆ ಅಯ್ಯಾ? ಆದಿ ಅನಾದಿಯಿಂದತ್ತತ್ತಲಾದ ಮಹಾಘನವಸ್ತುವಿನಲ್ಲಿ ರೂಪಿಸಿ ತೋರಿದ ನಿಜೈಕ್ಯನಡಗುವುದಕ್ಕೆ ಆ ಪರವಸ್ತುವೆ ಆಶ್ರಯವಲ್ಲದೆ, ಬೇರೆ ಆಶ್ರಯವುಂಟೆ ಅಯ್ಯಾ ಅಖಂಡೇಶ್ವರಾ.