Index   ವಚನ - 165    Search  
 
ಅರುಹು ತಲೆದೋರಿತೆಂದು, ಗುರುಹಿರಿಯರ ಜರಿಯಲಾಗದಯ್ಯ. ಗುರುವನು ಜರಿಯೆ; ಹಿರಿಯರನು ಜರಿಯೆ; ಅದೇನು ಕಾರಣವೆಂದಡೆ; ಗುರುವೇ ಸದ್ರೂಪು, ಲಿಂಗವೇ ಚಿದ್ರೂಪು, ಜಂಗಮವೇ ಆನಂದ ಸ್ವರೂಪು. ಇವು ಮೂರು ಬರಿಯ ಅರುಹು ಸ್ವರೂಪು. ಅವ ಜರಿಯಲುಂಟೆ? ನಡುವಣ ಪ್ರಕೃತಿಯ ಜರಿವುತ್ತಿಪ್ಪೆನಯ್ಯ. ಆ ಪ್ರಕೃತಿಯ ಜರಿದರೆ ಗುರುಹಿರಿಯರಿಗೆ ನಿಮಗೇಕೆ ದುಮ್ಮಾನವಯ್ಯ? ಪ್ರಕೃತಿಯೇನು ನಿಮ್ಮ ಸೊಮ್ಮೆ ಹೇಳಿರಯ್ಯ. ಜೀವನೋಪಾಯಕ್ಕೆ ಪರಮಾರ್ಥವನಲ್ಲಾಯೆಂಬ ಪ್ರಪಂಚಿಗಳ ಮೆಚ್ಚನು ಕಾಣ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.