Index   ವಚನ - 225    Search  
 
ಆಚಾರಲಿಂಗಾನುಭಾವದಿಂದ ಪೃಥ್ವಿಯ ಪೂರ್ವಾಶ್ರಯವನಳಿದ ಸದಾಚಾರನಿಷ್ಠನ ನೋಡಾ! ಸದ್ಗುರು ರತಿಯಿಂದ ಅಪ್ಪುತತ್ವದ ಪೂರ್ವಾಶ್ರಯವನಳಿದು ಸದ್ಗುರುನಿಷ್ಠನ ನೋಡಾ! ಶಿವಲಿಂಗದ ಸಂಗದಿಂದ ಅಗ್ನಿಯ ಪೂರ್ವಾಶ್ರಯವನಳಿದ ಶಿವಲಿಂಗಪ್ರೇಮಿಯಾದ ಶಿವಾಚಾರ ನಿಷ್ಠನ ನೋಡಾ! ಚರಲಿಂಗದ ಸಂಗದಿಂದ ವಾಯುವಿನ ಪೂರ್ವಾಶ್ರಯವನಳಿದ ಜಂಗಮಲಿಂಗಗ್ರಾಹಕನ ನೋಡಾ! ಪ್ರಸಾದಲಿಂಗದ ಸೇವಕತ್ವದಿಂದ ಕರ್ಮತ್ರಯವನಳಿದ ನಿರ್ಮಲ ನಿರಾವರಣನ ನೋಡಾ! ಮಹಾಲಿಂಗದ ಸಂಗದಿಂದ ಜೀವಭಾವವಳಿದ ಮಹಾಮಹಿಮನ ನೋಡಾ! ಲಿಂಗನಿಷ್ಠೆಯಿಂದ ಅಂಗಗುಣಂಗಳೆಲ್ಲವ ಕಳೆದುಳಿದ ನಿರಂಗಸಂಗಿಯ ನೋಡಾ! ಇಂತಪ್ಪ ಮಹೇಶ್ವರಂಗೆ ನಮೋನಮೋಯೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.