Index   ವಚನ - 270    Search  
 
ಪೃಥ್ವಿಯ ಮೇಲಣ ಕಲ್ಲ ತಂದು ಮರ್ತ್ಯರೆಲ್ಲರು ಪೂಜಿಸಿ ಶಿವಭಕ್ತಿಯೆಂದು ಮಾಡುತಿಪ್ಪರು ನೋಡಾ. ಕೊಟ್ಟಾತನ ಗುರುವೆಂಬರು; ಕೊಂಡಾತನ ಶಿಷ್ಯನೆಂಬರು. ಕೊಟ್ಟವ ಕೊಂಡವ ಉಭಯಮರ್ತ್ಯರೂ ಮರಣಕ್ಕೊಳಗಾಗಿ ಹೋಹಲ್ಲಿ ಪೃಥ್ವಿಯ ಕಲ್ಲು ಪೃಥ್ವಿಯಲುಳಿಯಿತ್ತು ನೋಡಾ. ಭಕ್ತಿ ಭ್ರಷ್ಟಾಗಿ ಹೋಯಿತ್ತು. ಹೀಂಗಲ್ಲ ಬಿಡಿ, ಇದು ಗುರುಶಿಷ್ಯಸಂಬಂಧವಲ್ಲ. ಅರುಹು ಸಹಿತವಾಗಿ ಗುರುವೆಂದೆಂಬೆ; ಆಚಾರಸಹಿತವಾಗಿ ಶಿಷ್ಯನೆಂದೆಂಬೆ; ನಿಷ್ಠೆ ಸಹಿತವಾಗಿ ಲಿಂಗವೆಂದೆಂಬೆ; ಇದು ಪರಮಸೌಖ್ಯ; ಪರಮ ಭಕ್ತಿಯ ಪರಿಣಾಮವು. ಉಳಿದವೆಲ್ಲ ಭ್ರಷ್ಟು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.