ಹಂಚುಕಂಥೆ, ಅತೀತ, ವಿರಕ್ತರು,
ಸ್ಥಲದವರು ಎಂದು ನುಡಿದಾಡುವರು.
ಜಂಗಮ ಒಂದೆ, ಲಿಂಗ ಒಂದೆ, ಗುರು ಒಂದೆ.
ಎನ್ನ ಪರಮಾರಾಧ್ಯರು ಬಸವಣ್ಣ ,
ತನ್ನ ಲೀಲೆಯಿಂದ
ಒಂದ ಮೂರು ಮಾಡಿ ತೋರಿದ,
ಮೂರನೊಂದು ಮಾಡಿ ತೋರಿದ.
ಆ ಒಂದು ನಾಮರೂಪಿಗಿಲ್ಲ.
ಇದರಂದವ ಬಲ್ಲ ಶರಣರು ತಿಳಿದು ನೋಡಿ.
ಇದನರಿಯದೆ ಸ್ಥಲನೆಲೆಯುಂಟೆಂದು
ಹೊಲಬುಗಾಣದೆ ಹೋರಾಡಿ,
ಭವಭಾರಿಗಳಾಗಬೇಡಾ!
ಭವವಿರಹಿತ ನಮ್ಮ ಬಸವಪ್ರಿಯ
ಕೂಡಲಚೆನ್ನಬಸವಣ್ಣಂಗೆ,
ಬಯಕೆ ಸವೆದು, ಭಾವ ಬಯಲಾಗಿ
ನಮೋ ನಮೋ ಎಂದು ಬದುಕಿದೆ.
ನೀವೂ ಬದುಕಿರೊ.