Index   ವಚನ - 238    Search  
 
ಹುಟ್ಟುವಾತ ಲಿಂಗಪಿಂಡದೊಳಡಗಿ ಬರಲು, ಪಿಂಡಗತಸ್ಥಲವೆನಿಸಿತ್ತು. ಬೆಳೆವಲ್ಲಿ ಶ್ರೀಗುರುಸ್ವಾಮಿ ಹಸ್ತಮಸ್ತಕಸಂಯೋಗವಂ ಮಾಡಿ, ಅಷ್ಟಾವರಣವನಳವಡಿಸಿ, ಅಷ್ಟತನುಗುಣವ ಕೆಡಿಸಿ, ಇಷ್ಟಲಿಂಗವಂ ದೃಷ್ಟವ ಮಾಡಿಕೊಡುವಲ್ಲಿ, ಅಂಗವೆ ಲಿಂಗಾರ್ಪಿತವೆಂದು ಸಂಗನಶರಣರಂ ಸಾಕ್ಷಿಯಂ ಮಾಡಿ, ಮೋಕ್ಷವನೈದಿಸಿದಿರಾಗಿ ಅದೀಗ ಲಿಂಗೈಕ್ಯ. ಇದು ಕಾರಣ, ಪಿಂಡಗತವೆಂದರೂ ಲಿಂಗೈಕ್ಯವೆಂದರೂ ಒಂದೇ ಸಮರಸ. ಅದಕ್ಕೆ ದೃಷ್ಟ: ಅಭೇದಂ ಜ್ಞಾನರೂಪೇಣ ಮಹಾನಂದಮಮಲಂ ಧ್ರುವಂ ಅತಕ್ರ್ಯಮದ್ವಯಂ ಪೂರ್ಣಂ ಬ್ರಹ್ಮೈವಾಸ್ತಿ ನ ಸಂಶಯಃ || ಎಂದುದಾಗಿ, ಇದೀಗ ಲಿಂಗೈಕ್ಯದಿರವು. ಬಸವಪ್ರಿಯ ಕೂಡಲಚೆನ್ನಬಸವಣ್ಣ, ಮಾಂ ತ್ರಾಹಿ, ತ್ರಾಹಿ ಕರುಣಾಕರನೆ.