ವಚನ - 328     
 
ಮರ್ತ್ಯಲೋಕದ ಭಕ್ತರ ಮನವ ಬೆಳಗಲೆಂದು ಇಳಿತಂದನಯ್ಯಾ ಶಿವನು, ಕತ್ತಲೆಯ ಪಾಳೆಯವ ರವಿ ಹೊಕ್ಕಂತಾಯಿತ್ತಯ್ಯಾ. ಚಿತ್ತದ ಪ್ರಕೃತಿಯ ಹಿಂಗಿಸಿ, ಮುಕ್ತಿಪಥವ ತೋರಿದನೆಲ್ಲ ಅಸಂಖ್ಯಾತ ಗಣಂಗಳಿಗೆ. ತನುವೆಲ್ಲ ಸ್ವಯಲಿಂಗ, ಮನವೆಲ್ಲ ಚರಲಿಂಗ. ಭಾವವೆಲ್ಲ ಮಹಾಘನದ ಬೆಳಗು. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣ ಸಮ್ಯಕ್‍ಜ್ಞಾನಿ ಚೆನ್ನಬಸವಣ್ಣನ ಶ್ರೀ ಪಾದಕ್ಕೆ ಶರಣೆಂದು ಎನ್ನ ಭವಂ ನಾಸ್ತಿಯಾಯಿತ್ತಯ್ಯಾ ಪ್ರಭುವೆ.