ವಚನ - 372     
 
ಶಿವನು ತಾನೆ ಗುರುವಾಗಿ ಬಂದು ಮಹಾಘನಲಿಂಗವ ವೇದಿಸಿಕೊಟ್ಟ ಪರಿಯೆಂತೆಂದೊಡೆ: ಆತ್ಮಗೂಡಿ ಪಂಚಭೂತಂಗಳನೆ ಷಡಂಗವೆಂದೆನಿಸಿ, ಆ ಅಂಗಕ್ಕೆ ಕಲೆಗಳನೆ ಷಡುಶಕ್ತಿಗಳೆನಿಸಿ, ಆ ಶಕ್ತಿಗಳಿಗೆ ಷಡ್ವಿಧ ಭಕ್ತಿಯನಳವಡಿಸಿ, ಆ ಭಕ್ತಿಗಳಿಗೆ ಭಾವ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಗಳನೆ ಹಸ್ತಂಗಳೆಂದೆನಿಸಿ, ಆ ಹಸ್ತಂಗಳಿಗೆ ಮಹಾಲಿಂಗವಾದಿಯಾದ ಪಂಚಲಿಂಗಂಗಳನೆ ಷಡ್ವಿಧ ಲಿಂಗಂಗಳೆಂದೆನಿಸಿ, ಆ ಮಂತ್ರಲಿಂಗಂಗಳಿಗೆ ಹೃದಯಗೂಡಿ ಪಂಚೇಂದ್ರಿಯಂಗಳನೆ ಮುಖಂಗಳೆಂದೆನಿಸಿ, ಆ ಮುಖಂಗಳಿಗೆ ತನ್ಮಾತ್ರಂಗಳನೆ ದ್ರವ್ಯ ಪದಾರ್ಥಗಳೆಂದೆನಿಸಿ, ಆ ದ್ರವ್ಯಪದಾರ್ಥಂಗಳು ಆಯಾ ಮುಖದ ಲಿಂಗಗಳಲ್ಲಿ ನಿರಂತರ ಸಾವಧಾನದಿಂದ ಅರ್ಪಿತವಾಗಿ ಬೀಗಲೊಡನೆ ಅಂಗಸ್ಥಲಂಗಳಡಗಿ, ತ್ರಿವಿಧ ಲಿಂಗಾಂಗ ಸ್ಥಲಂಗಳುಳಿದು, ಕಾಯ ಗುರು, ಪ್ರಾಣ ಲಿಂಗ, ಜ್ಞಾನ ಜಂಗಮ, ಗುರುವಿನಲ್ಲಿ ಶುದ್ಧ ಪ್ರಸಾದ ಲಿಂಗದಲ್ಲಿ ಸಿದ್ಧ ಪ್ರಸಾದ ಜಂಗಮದಲ್ಲಿ ಪ್ರಸಿದ್ಧ ಪ್ರಸಾದ ಇಂತೀ ತ್ರಿವಿಧ ಪ್ರಸಾದ ಏಕಾರ್ಥವಾಗಿ ಮಹಾಘನ ಪರಿಪೂರ್ಣ ಪ್ರಸಾದವಳವಟ್ಟ ಶರಣ ಜ್ಞಾನಿಯಲ್ಲ, ಅಜ್ಞಾನಿ ಮುನ್ನವೆ ಅಲ್ಲ, ಶೂನ್ಯನಲ್ಲ, ನಿಶ್ಶೂನ್ಯನಲ್ಲ, ದ್ವೈತಿಯಲ್ಲ, ಅದ್ವೈತಿಯಲ್ಲ. ಇಂತೀ ಉಭಯಾತ್ಮಕ ತಾನೆಯಾಗಿ ಇದು ಕಾರಣ, ಇದರಾಗುಹೋಗು ಸಕಲಸಂಬಂಧವ ಚೆನ್ನಮಲ್ಲಿಕಾರ್ಜುನದೇವಾ, ನಿಮ್ಮ ಶರಣರೆ ಬಲ್ಲರು.