ವಚನ - 414     
 
ಹಾಲ ಹಿಡಿದು ಬೆಣ್ಣೆಯನರಸಲುಂಟೆ? ಲಿಂಗವ ಹಿಡಿದು ಪುಣ್ಯತೀರ್ಥಕ್ಕೆ ಹೋಗಲುಂಟೆ? ಲಿಂಗದ ಪಾದತೀರ್ಥ ಪ್ರಸಾದವ ಕೊಂಡು ಅನ್ಯಬೋಧೆ ಅನ್ಯಶಾಸ್ತ್ರಕ್ಕೆ ಹಾರೈಸಲೇತಕ್ಕೆ? ಇಷ್ಟಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಶರಣೆಂದೆನಾದಡೆ ತಡೆಯದೆ ಹುಟ್ಟಿಸುವನು ಶ್ವಾನನ ಗರ್ಭದಲ್ಲಿ.* ಅದೆಂತೆಂದಡೆ; ಶಿವಧರ್ಮ ಪುರಾಣದಲ್ಲಿ: 'ಇಷ್ಟಲಿಂಗಮವಿಶ್ವಸ್ಯ ತೀರ್ಥಲಿಂಗಸ್ಯ ಪೂಜಕಃ| ಶ್ವಾನಯೋನಿಶತಂ ಗತ್ವಾ ಚಾಂಡಾಲಗೃಹಮಾಚರೇತ್'|| ಎಂದುದಾಗಿ, ಇದನರಿದು ಗುರು ಕೊಟ್ಟ ಲಿಂಗದಲ್ಲಿಯೆ ಎಲ್ಲಾ ತೀರ್ಥಂಗಳೂ ಎಲ್ಲಾ ಕ್ಷೇತ್ರಂಗಳು ಇದ್ದಾವೆಂದು ಭಾವಿಸಿ ಮುಕ್ತರಪ್ಪುದಯ್ಯಾ. ಇಂತಲ್ಲದೆ ಗುರು ಕೊಟ್ಟ ಲಿಂಗವ ಕಿರಿದು ಮಾಡಿ, ತೀರ್ಥಲಿಂಗವ ಹಿರಿದು ಮಾಡಿ ಹೋದಾತಂಗೆ ಅಘೋರ ನರಕ ತಪ್ಪದು ಕಾಣಾ ಚೆನ್ನಮಲ್ಲಿಕಾರ್ಜುನಾ.