Index   ವಚನ - 75    Search  
 
ಆರು ದರುಶನ, ಹದಿನೆಂಟು ಸಮಯ ನೂರೊಂದು ಕುಲಕೆ ಬೇರೆ ಒಬ್ಬ ದೈವವೆ? ಹೋರಾಡುವರು ಭವಿಭಕ್ತರೆಂದು, ಊರು ಮೊಗೆವ ನೀರು, ಭವಿಯ ಎಂಜಲು! ತೋರುವ ಅಗ್ನಿಗೆ ಕ್ರಿಯೆ ಉಂಟೆ? ಸೂರ್ಯಚಂದ್ರರು ಭವಿಯ ಕಿರಣದೊಳು ಇದ್ದು ಭಕ್ತನೆಂತೋ? ದೂರವಿಲ್ಲ ಅಷ್ಟದಿಕ್ಪಾಲಕರು ಬ್ರಹ್ಮಾಂಡ ಪಿಂಡಾಂಡಕೆ. ಯಾರಾದರೂ ಕುತರ್ಕಿಸುವರು, ಭವಿ ಮೊದಲೊ? ಭಕ್ತ ಮೊದಲೊ? ತೀರದ ಮಾತನಾಡುವ ತಿರುಬೋಕಿಗೆ ಮುಕ್ತಿ ಇಲ್ಲ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.