Index   ವಚನ - 89    Search  
 
ಉದ್ಯೋಗವ ಮಾಡಿ ತಂದಾಕ್ಷಣ ಖಂಡಿಸುವುದು ಅನರ್ಘ್ಯ. ಉದ್ಯೋಗ: ಮನೆಯೊಳು ನಾಳೆ ಎಂಬುದು ಉತ್ತಮ. ಉದ್ಯೋಗ: ಮನೆಯೊಳು ನಾಡದಿಗೆ ಎಂಬುದು ಮಧ್ಯಮ. ಉದ್ಯೋಗ: ದಿನ ವಾರ ಬಡ್ಡಿ ಕೊಡುವುದ ಅಧಮ. ಉದ್ಯೋಗ: ಅನುಪತ್ತಿಗೆ (ಅನುವು ಆಪತ್ತಿಗೆ?) ಕಡ ಕೊಡುವುದು ಕನಿಷ್ಠ. ಉದ್ಯೋಗ: ಹುಸಿ ಚಂಡಾಲ, ತೂಕ ಮಾಪು ಕಡಮೆಗೊಡುವುದು ಕುನಾಮಿ. ಉದ್ಯೋಗ: ತಾನುಣ್ಣದೆ ದ್ರವ್ಯದ ಕೊಡಿಸಿಡುವುದ ನಿರ್ನಾಮಿ. ಉದ್ಯೋಗ: ಮನೆಗಳ ಕನ್ನ, ದಾಸಿ ವೇಶಿಯರ ಸಂಗ, ಪಾಪದ ಪುಂಜ. ಉದ್ಯೋಗ: ನಂಬಿದ ಒಡವೆಗಳುಪುವುದ ನಾಯಕನರಕ. ಉದ್ಯೋಗ: ಪರಧನ, ಪರಸ್ತ್ರೀ, ಪರನಿಂದೆ, ಪಾಪದ ಶಾಪ; ಪ್ರಾರಬ್ಧ ನರಕ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.