ತನ್ನ ಸತಿ, ತನ್ನ ಕಾಯಕ, ತನ್ನ ಕಾಯ ಕೃಷಿಯಲ್ಲದೆ
ಅನ್ಯತ್ರವ ನೋಡಿ ಗ್ರಹಿಸದಾತನ ನೋಟವೆ ನೋಟ.
ಇನ್ನು ಶಿವಶ್ರುತಿಯಲ್ಲದೆ, ನರಸ್ತುತಿಯ ಕೇಳದುದೆ ಕರ್ಣ.
ಉನ್ನಂತ ದುರ್ಗಂಧ ಹೊಂದದೆ ಸುಗಂಧ
ತೃಪ್ತಿವಡೆವುದೆ ನಾಸಿಕ.
ತನ್ನ ತಾನರಿತು, ಒಬ್ಬರನಾಡದೆ, ನಿಂದೆ ಬಿಟ್ಟುದೆ ಜಿಹ್ವೆ.
ಮುನ್ನ ಇವು ನಾಲ್ಕು, ಮುಕ್ತಿ ಬೇಕಾದವರು ಇಂತಪ್ಪುದು.
ಮನ್ನಿಸುವುದು ಇಂತು ನಾಲ್ಕು ಶುದ್ಧವುಳ್ಳವರು.
ಅನ್ಯಾಯಿಗಳನೊಪ್ಪುವರೆ ಸಂಗಯ್ಯನ ಶರಣರು?
ಅನ್ಯಾಯಿಗೆ ಪ್ರಳಯ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.