Index   ವಚನ - 95    Search  
 
ತತ್ವದ ಮಾತು ತೊತ್ತು ಮಾರಿಗೇತಕ್ಕೆ? ಭಕ್ತಿಯೆಂಬುದು ಸಾಮಾನ್ಯದ ಪಕ್ಷವೆ? ಮಿಥ್ಯವ ಮನದೊಳಿಟ್ಟವನ ಸತ್ಯವ ಸುಡು ಹುತ್ತಿನಲಿ ಬಂದು ಸತ್ತವನು, ಹಾವಿನ ಕೊಲೆ. ಉತ್ತಮನು ಮಧ್ಯಮ[ನ] ಹೊಂದಲು, ಉತ್ತಮಗೊಲೆ. ಸತ್ತಲ್ಲಿ ನಿಂದರೆ ದುಃಖ, ಹೆತ್ತಲ್ಲಿ ನಿಂತರೆ ಮೋಹ. ಹತ್ತೆ ಹೊಂದಬಾರದು, ಈ ಮೂರ್ಖರ ಸಮೀಪವ. ಭಕ್ತರ ರಾಜಾಂಗಣ ಬಳಿವ ಕಸಬರಿಗೆಯಾಗಬಹುದಲ್ಲದೆ, ವ್ಯರ್ಥರ ಕೂಟ ಸಲ್ಲದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.