ಆದಿಯಲ್ಲಿ ಒಂದು ಓಂಕಾರವೆಂಬ ಬೀಜದಿಂದ
ನಕಾರತ್ವವೆಂಬ ವೃಕ್ಷ ಪುಟ್ಟಿತು.
ಪಾದ ಬೇರುವರಿಯಿತು ನಿರ್ವಯಲ ಚೈತನ್ಯದೊಳು
ಮಸ್ತಕ ಅಂಕುರವಡೆಯಿತ್ತು.
ನಿಃಪ್ರವೇಶದಲಿ ಕಾದ ನಡು ಬುಡಕ್ಕೆ,
ಕೊನೆ ಬೇರು, ಬೇರು ಕೊನೆ
ಭೇದವಿಲ್ಲದೆ ಬೇರಿನಿಂದ ಬೀಜವಾಯಿತ್ತು;
ಬೀಜದಿಂದ ಬೇರುವರಿಯಿತ್ತು.
ಶೋಧಿಸಿ ನೋಡಿರಿ ಇಹದಲ್ಲಿ ಶರಣರು, ಓಂಕಾರವ.
ವಾದ ಕುತರ್ಕಕ್ಕೆ ಎರಡರ ಸಂಬಂಧ ವಿದರಣ ದೂರ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.