Index   ವಚನ - 153    Search  
 
ನಾಲ್ಕು ಮಠ ನಾಲ್ಕು ಜಂಗಮಸ್ಥಲವೆಂಬ ಕಂಗುರುಡರ ಮಾತ ಕೇಳಬಾರದು. ನಾಲ್ಕು ಮಠ ನಾಲ್ಕು ಜಂಗಮಸ್ಥಲವಾದರೆ ಬಸವೇಶ್ವರನ ಕಾಡಿಬೇಡಿ ಉಣ್ಣಲ್ಯಾತಕ್ಕೊ? ನಾಲ್ಕು ಮಠ ನಾಲ್ಕು ಜಂಗಮಸ್ಥಲವಾದರೆ ಬಸವೇಶ್ವರ ಪಂಚಪರುಷ ನೋಡವರೆ? ಅದೇನು ಕಾರಣವೆಂದರೆ- ಪ್ರಭುವೆಂಬ ಜಂಗಮ ಅನಂಗವೇಷದಲ್ಲಿ ಬರಲು, ಬಸವೇಶ್ವರನ ಭಕ್ತಿ, ಮುಕ್ತಿ ಪಂಚಪರುಷ ಏನಾದಿತೊ? ಮಾಡಿದ ಬೋನ ಪದಾರ್ಥವೆಲ್ಲ ಬಯಲು ಬಯಲಾಯಿತೋ ಅದೇನು ಕಾರಣವೆಂದರೆ- ಸೂರ್ಯನ ಉದಯಕ್ಕೆ ದೀಪದ ಬೆಳಗು ಹ್ಯಾಗೆ ಹಾಗೆ. ಇದು ಕಾರಣ ನಾಲ್ಕು ಮಠಸ್ಥಲಕ್ಕೆ ಬಸವೇಶ್ವರನೆ ಗುರುವು, ಲಿಂಗವೆ ಸಂಗಯ್ಯ ದೇವರು, ಜಂಗಮವೆ ಪ್ರಭು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.