Index   ವಚನ - 154    Search  
 
ನಾಲ್ಕು ಆಚಾರ್ಯರ ಮಠಸ್ಥಲಗಳ ಕೇಳಿರಯ್ಯ: ನಾಲ್ಕು ಆಚಾರ್ಯರ ಮಠಗಳ ಯಾವಾವೆಂದರೆ, ರೇವಣಸಿದ್ದೇಶ್ವನೆಂಬ ಆಚಾರ್ಯನ ಮಠವು ಕೃತಯುಗವು; ಮರಳುಸಿದ್ದೇಶ್ವರನೆಂಬ ಆಚಾರ್ಯನ ಮಠವು ತ್ರೇತಾಯುಗವು; ಏಕೋರಾಮೇಶ್ವರನೆಂಬ ಆಚಾರ್ಯನ ಮಠವು ದ್ವಾಪರ[ಯುಗ]ವು; ಪಂಡಿತಾರಾಧ್ಯನೆಂಬ ಆಚಾರ್ಯನ ಮಠವು ಕಲಿಯುಗವು; ಇವೇ ನಾಲ್ಕು ಯುಗಕ್ಕೆ ನಾಲ್ಕು ಮಠಗಳು, ಪ್ರಥಮ ಕೃತಯುಗದಲ್ಲಿ ರೇವಣಸಿದ್ಧೇಶ್ವರನೆಂಬ ಆಚಾರ್ಯನಿಗೆ ಚಿನ್ನದ ಲಿಂಗವ ಕೊಡುವಾಗಲೆ, ಗುರುವಿನ ಆಜ್ಞೆಯಿಂದಲೆ ಮೂವರು ಆಚಾರ್ಯರ ಸನ್ಮತದಿಂದಲೆ, ದೀಕ್ಷವಂ ಇತ್ತನೆ. ಇನ್ನು ತ್ರೇತಾಯುಗದಲ್ಲಿ ಮರುಳಸಿದ್ಧೇಶ್ವರನೆಂಬ ಆಚಾರ್ಯನಿಗೆ ಬೆಳ್ಳಿಯ ಲಿಂಗವ ಕೊಡುವಾಗಲೆ, ಗುರುವಿನ ಆಜ್ಞೆಯಿಂದಲೆ ಮೂವರು ಆಚಾರ್ಯರ ಸನ್ಮತದಿಂದಲೆ, ದೀಕ್ಷವಂ ಇತ್ತನು. ಇನ್ನು ದ್ವಾಪರಯುಗದಲ್ಲಿ ಏಕೋರಾಮೇಶ್ವರೆಂಬ ಆಚಾರ್ಯನಿಗೆ ತಾಮ್ರದ ಲಿಂಗವ ಕೊಡುವಾಗಲೆ, ಗುರುವಿನ ಆಜ್ಞೆಯಿಂದಲೆ ಮೂವರು ಆಚಾರ್ಯರ ಸನ್ಮತದಿಂದಲೆ, ದೀಕ್ಷವಂ ಇತ್ತನು. ಇನ್ನು ಕಲಿಯುಗದಲ್ಲಿ ಪಂಡಿತಾರಾಧ್ಯನೆಂಬ ಆಚಾರ್ಯರನಿಗೆ ಕಲ್ಲು ಲಿಂಗವ ಕೊಡುವಾಗಲೆ ಗುರುವಿನ ಆಜ್ಞೆಯಿಂದಲೆ ಮೂವರು ಆಚಾರ್ಯರ ಸನ್ಮತದಿಂದಲೆ, ದೀಕ್ಷವಂ ಇತ್ತನು. ಈ ಪ್ರಕಾರದಲ್ಲಿ ಕೊಡಲಿಕ್ಕಾಗಿ, ಈ ನಾಲ್ವರಿಗೆ ಕರ್ತೃ ಗುರು ಬಸವೇಶ್ವರನು ಬಂದಿರಲಿಕ್ಕೆ, ಈ ನಾಲ್ವರು ಆಚಾರ್ಯರು ಲಾಂಛನವಂ ತೊಟ್ಟವರೆ (ರು?) ಲಾಂಛನಕ್ಕೆ ಜಂಗಮವೆಂದು ಪರಮಗುರು ಬಸವೇಶ್ವರನ ಹಳಿದು ಆಡಿದ ಕಾರಣದಿಂದಲೆ, ದೀಕ್ಷಾವಿಧಾನಂಗಳು ತಪ್ಪಿ ಕಡೆಮೊದಲೆಂದರಿಯದೆ, ಯಥೋಭ್ರಷ್ಟರಾಗಿ, ಶಿಲೆಯ ಲಿಂಗವ ಹೋಗಾಡಿ ಹೊಲಬುಗೆಟ್ಟರು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.